
ಮಧುರ ನೆನಪುಗಳೇ ಹಾಗೆ.ಅವು ನಲ್ಲೆಯ ಹುಸಿಮುನಿಸಿನಂತೆ, ಹೊಸ ಮಳೆಯಿಂದ ತೊಯ್ದ ಮಣ್ಣಿನ ಘಮದಂತೆ, ಸಂಜೆಗಳಲ್ಲೊಮ್ಮೆ ಅರಳಿಬಿಡುವ ಬ್ರಹ್ಮ ಕಮಲದಂತೆ, ನಿದ್ದೆ ಹೋದ ಮಗುವಿನ ಮೊಗದಲ್ಲಿ ಲಾಸ್ಯವಾಡಿ ಕಣ್ಮರೆಯಾಗಿ ಹೋಗುವ ನಿಷ್ಕಲ್ಮಶ ನಗುವಿನಂತೆ,ಫಕ್ಕನೆ ಸುಳಿದು ಸುಂದರ ಅನುಭೂತಿಯನ್ನು ಮೂಡಿಸಿ ಕಣ್ಮರೆಯಾಗುತ್ತವೆ.
ಅವು ನೀಡುವ ಅನುಭವಗಳೂ ಅದ್ಭುತ.ಹಜಾಮನಿಗೊಪ್ಪಿಸಿದ ತಲೆಯಲ್ಲಿ ಕತ್ತರಿಯಾಡುತ್ತಿರುವಾಗ ಉಂಟಾಗುವ ಹಿತಕರವಾದ ಕೆರತದಂತೆ, ನೋವಿಲ್ಲದ ಹುಳುಕು ಹಲ್ಲಿನ ಮಧ್ಯೆ ನಾಲಿಗೆ ಓಡಾಡಿಸಿದಂತೆ, ಮೂರನೇ ಮಹಡಿಯ ಗ್ರಿಲ್ಲನ್ನೂ ದಾಟಿ ಒಳಬಂದುಬಿಡುವ ಕಳ್ಳ ಬೆಕ್ಕಿನಂತೆ, ಸದ್ದಿಲ್ಲದೆ ಮನಸ್ಸನ್ನಾವರಿಸಿಬಿಡುತ್ತವೆ. ಹಾಗೆಯೇ ಅವಳ ನೆನಪೂ ಸಹ ಒಂದು ಹಿತಕರವಾದ ಪೀಡೆಯಂತೆ ನನ್ನನ್ನು ಆಗಾಗ ಕಾಡುತ್ತಲೇ ಇರುತ್ತದೆ.
ಆಕೆ ಮತ್ತು ನಾನು ಒಂದೇ ದಿನ, ಒಂದೇ ಸಮಯದಲ್ಲಿ ಕಾಲೇಜು ಮೆಟ್ಟಿಲು ಹತ್ತಿದವರು. ಆದರೆ ವ್ಯತ್ಯಾಸವಿಷ್ಟೇ, ಆ ದಿನ ನಾನು ನೋಡಿದ್ದು ಕಾಲೇಜು ಮೆಟ್ಟಿಲನ್ನು ಮಾತ್ರ.ಆಕೆಯ ನೋಟ ಎಲ್ಲಿ ಹರಿದಾಡುತ್ತಿತ್ತೋ ನಾನಂತೂ ಅರಿಯೆ. ಹಾಗೇ ಒಂದೆರಡು ತಿಂಗಳುಗಳೇ ಸರಿದು ಹೋದವು. ಕೆಲವೊಮ್ಮೆ ಕಣ್ಣಭಾಷೆಗಳನ್ನು ಅರ್ಥೈಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದು ಹೊರತುಪಡಿಸಿ ಯಾವುದೇ ಗುರುತರ ಸಾಧನೆಯಾಗಿರಲಿಲ್ಲ.ಹಾಗೆಂದು ಆಕೆಯೇನು ಅಸಾಮಾನ್ಯ ರೂಪಸಿಯಾಗಿರಲಿಲ್ಲ, ಜಂಭದ ಕೋಳಿಯಾಗಿರಲಿಲ್ಲ, ತುಂಬ ಬಿಂಕ ಬಿನ್ನಾಣಗಳೂ ಆಕೆಗಿರಲಿಲ್ಲ. ಆದರೆ ಆಕೆಯನ್ನು ಮಾತಾಡಿಸುವ ಧೈರ್ಯ ಅಥವಾ ಆ ಅವಶ್ಯಕತೆಯೇ ನನಗೆ ಬರಲಿಲ್ಲ. ಆಕೆಯದು ದೇವತೆಯ ಚೆಲುವು, ಮೊಗದಲ್ಲಿ ಸದಾ ಹಸನ್ಮುಖತೆ, ಪ್ರಶಾಂತತೆ. ಆಕೆ ನಿರಾಭರಣ ಸುಂದರಿ. ಒಮ್ಮೆ ನೆರಿಗೆ ಚಿಮ್ಮಿ ಕಾರಿಡಾರಿನಲ್ಲಿ ನಡೆಯುತ್ತಾ ಹೊರಟಳೆಂದರೆ ಮಾಲಿಯ ಅವಕ್ರಪೆಗೆ ಪಾತ್ರರಾಗಿ ಒಣಗಿ,ಸೊರಗಿ, ಸತ್ತುಹೋಗುವ ಸ್ಥಿತಿಯಲ್ಲಿದ್ದ ಹೂ ಗಿಡಗಳ ತುಂಬಾ ಬಣ್ಣಬಣ್ಣದ ಹೂಗಳು, ಚೆಂದಚೆಂದದ ಚಿತ್ತಾರಗಳು. ಹೀಗೆ ಯಾವ ಅನುಭವಕ್ಕೂ ಸಿಗದಂತೆ, ಯಾವ ಊಹೆಗೂ ನಿಲುಕದಂತೆ, ಮರೀಚಿಕೆಯಂತೆ ನನ್ನನ್ನು ಕಾಡಿದ ಅವಳು ಟ್ಯೂಶನ್ನಿನಲ್ಲೂ ದರ್ಶನವೀಯುತ್ತಾಳೆಂದೆಣಿಸಿರಲಿಲ್ಲ. ತನ್ನ ಜಂಭದ ಚೀಲದ ಜೊತೆಗೆ ನನ್ನ ಪಕ್ಕದಲ್ಲಿಯೇ ಬಂದು ಕುಳಿತಾಗ ನನಗೆ ದಿಗಿಲೋ ದಿಗಿಲು. ಆವತ್ತು ನಾನು ಮ್ಯೆ ಹಿಡಿಯಾಗಿಸಿಕೊಂಡು, ಪೆದ್ದು ಪೆದ್ದಾಗಿ ವರ್ತಿಸುತ್ತ ಕಳೆದ ಆ ಗಳಿಗೆ ನನಗೆ ಈಗಲೂ ಚೆನ್ನಾಗಿ ನೆನಪಿದೆ.
ಹೀಗೆ ದಿನಕಳೆಯುತ್ತಿದ್ದಂತೆ ನಮ್ಮ ಸ್ನೇಹ ಬೆಳೆಯುತ್ತ ಹೋಯಿತು. ವಿಚಿತ್ರವೆಂದರೆ ಆ ಸ್ನೇಹಕ್ಕಿನ್ನೂ ಮಾತಿನ ಕಳೆ ದೊರೆತಿರಲಿಲ್ಲ. ಚಿಕ್ಕ ಪುಟ್ಟ ಹಾಯ್, ಬಾಯ್, ಥ್ಯಾಂಕ್ಯೂಗಳಲ್ಲೇ ನಮ್ಮ ಮಾತುಕತೆ ಮುಗಿದುಹೋಗುತ್ತಿತ್ತು. ಆದರೆ ನನ್ನ ಪಾಲಿಗೆ ಅವು ತುಂಬ ಚೆಂದದ ದಿನಗಳಾಗಿದ್ದವು. ಈಗ ನನಗೆ ಕನ್ನಡಿಯಲ್ಲಿ ನನ್ನ ಪ್ರತಿಬಿಂಬ ಕಾಣುತ್ತಿತ್ತು. ಇದ್ದುದರಲ್ಲೆ ಒಪ್ಪಗಿನ ಬಟ್ಟೆಗಳಿಗೆ ಇಸ್ತ್ರಿ ಬೀಳಲಾರಂಭಿಸಿತ್ತು. ನನ್ನ ಸೈಕಲ್ಲಿನ ಮೇಲೆ ನನಗೆ ಅತೀವ ಪ್ರೀತಿಯುಂಟಾಗಿ ಸರ್ವಿಸಿಂಗಿಗೆಂದು ಅದು ಸಾಬಿಯ ಅಂಗಡಿ ಸೇರಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನಲ್ಲಿ ತುಂಬ ಮಟ್ಟಸ ಬರಲು ಪ್ರಾರಂಭವಾಗಿತ್ತು. ಯಾವಾಗಲೂ ಸೂರ್ಯವಂಶಿಯೇ ಆಗಿದ್ದ ನಾನು ಬೆಳ್ಳ್ಂಬೆಳಗ್ಗೆಯೇ ಎದ್ದು ಟ್ಯೂಶನ್ನಿನ ಸಮಯಕ್ಕೆ ಗಂಟೆಗಟ್ಟಲೆ ಮೊದಲೇ ಹೋಗಿ ತಿರುವಿನಲ್ಲಿ ಆಕೆಯ ದಾರಿ ನೋಡುತ್ತ ನಿಂತು ಬಿಡುತ್ತಿದ್ದೆ. ಇವತ್ತಿಗೂ ಅಷ್ಟು ಚೆಂದನೆಯ ಸೂರ್ಯೋದಯವನ್ನು, ಅಷ್ಟು ಒಳ್ಳೆಯ ಹುಡುಗಿಯನ್ನು ನೋಡಿದ ನೆನಪು ಕಣ್ಣಿನೊಳಪೊರೆಗಂಟಿದ ಚಿತ್ರದಂತಿದೆ.
ದೇವತೆಯೆಂದರೆ ಸಾಕೆ, ಬರಲು ಪಲ್ಲಕ್ಕಿ ಬೇಡವೇ? ಒಂದು ಚೆಂದನೆಯ ಸ್ಕೂಟಿಯೊಂದಿಗೆ ಆಕೆ ಬರುತ್ತಿದ್ದಳು. ತಿರುವಿನಲ್ಲಿ ನಿಂತ ನನ್ನನ್ನು ನೋಡಿದವಳೇ ಪ್ರತಿ ಬೆಳಗಿಗೂ ಒಲುಮೆಯ ಶುಭಾಷಯ ಹೇಳುತ್ತಿದ್ದಳು. ಅವಳ ಕಣ್ಣುಗಳಲ್ಲಿ ಥೇಟ್ ಮಗುವಿನ ಮುಗ್ಧತೆಯಿತ್ತು. ಕಣ್ಣಂಚಿನಲ್ಲಿ ತುಂಟತನವಿತ್ತು, ಜೊತೆಗೇ ಚಿಕ್ಕ ಜಗಳಗಂಟತನವಿತ್ತು.ಆಕೆಯ ಮುಗುಳ್ನಗೆ, ಆ ಕಣ್ಣಪ್ರೀತಿ ನನ್ನನ್ನು ಹುಚ್ಚನನ್ನಾಗಿಸುತ್ತಿತ್ತು. ನನ್ನ ಸೈಕಲ್ ಜೊತೆಗೂಡಿ ಸ್ಕೂಟಿ ಜಂಭದ ಹೆಜ್ಜೆಯಿಡುತ್ತಿದ್ದಾಗ ,ನಾನು ಆಕೆಯೊಡಗೂಡಿ ಹೆಜ್ಜೆ ಹಾಕುತ್ತಿದ್ದೆ. ಆ ದಿವ್ಯ ಮೌನಕ್ಕೆ, ಅದು ತಂದು ಕೊಡುತ್ತಿದ್ದ ಆತ್ಮ ಸಂತೋಷಕ್ಕೆ ನನ್ನ ಜೀವನವೇ ಮುಡಿಪು ಎಂದೆನಿಸುತ್ತಿತ್ತು. ಹಾಕಿದ ಪ್ರತಿಯೊಂದು ಹೆಜ್ಜೆಯೂ ನಮ್ಮಿಬ್ಬರ ಸ್ನೇಹವನ್ನೂ, ಸಂಬಂಧವನ್ನೂ ಧ್ರಡಪಡಿಸುತ್ತ ಹೋಗುತ್ತಿತ್ತು. ಮಾತಿಗೆ ಅಲ್ಲಿ ಯಾವ ಬೆಲೆಯೂ ಇರಲಿಲ್ಲ. ಮೌನವೇ ಮಾತಾಗಿತ್ತು.ಮಾತಿನ ಗೋಜಿಗೇ ಹೋಗದೆ ಪರಸ್ಪರರನ್ನು ಅರಿಯುವ ಕಲೆ ನಮಗೆ ಸಿಧ್ಧಿಸತೊಡಗಿತ್ತು. ಅಚ್ಚ ಬಿಳುಪಿನ ಕಪ್ಪು ಚುಕ್ಕಿಗಳ ಲಂಗದ ನೆರಿಗೆ ಚಿಮ್ಮುತ್ತ ಆಕೆ ನಡೆಯುತ್ತಿದ್ದರೆ ಥಟ್ಟನೆ ನೆನಪಗುತ್ತಿದ್ದುದು " ಬಂತು ಶ್ರಾವಣ, ಬಂತು ನಾಡಿಗೆ, ಬಂತು ಬೀಡಿಗೆ, ಬಂತು ಕಾಡಿಗೆ" ಎಂಬ ನನ್ನೆದೆಯ ಹಾಡು.
ಗೋಕುಲಾಷ್ಟಮಿಗೂ, ಇಮಾಮ್ ಸಾಬಿಗೂ ಎತ್ತಣ ಸಂಬಂಧ ಎಂಬಂತೆ ನಾನು ಕಪಿಯಾಗಿದ್ದವನು ಕವಿಯಾಗತೊಡಗಿದ್ದೆ. ನನ್ನ ನೋಟ್ಸಿನ ಮುನ್ನುಡಿ, ಬೆನ್ನುಡಿಗಳೆಲ್ಲ ಕವಿತೆಗಳೇ, ನನ್ನೊಲುಮೆಯ ಕನಸುಗಳೇ ಆಗಿರುತ್ತಿದ್ದವು. ಪ್ರತಿ ಪೇಜಿನಲ್ಲೂ ಚಿತ್ರ, ಪ್ರತಿ ಸಾಲಿನಲ್ಲೂ ಚಿತ್ತಾರ. ಹಾಗಾಗಿ ಪಠ್ಯ ವಿಷಯಗಳಿಗಿಂತ ಹೆಚ್ಚಾಗಿ ಹುಚ್ಚು ಮನಸಿನ ಹತ್ತು ಮುಖಗಳೇ ನೋಟ್ಸಿನ ತುಂಬ ತುಂಬಿ ಹೋಗಿರುತ್ತಿದ್ದವು. ಪಠ್ಯದ ವಿಷಯದಲ್ಲಿ ಆಕೆ ತುಂಬಾ ಜಾಣೆ. ಆದರೂ ಗಣಿತ ಅವಳ ಪಾಲಿಗೆ ನನ್ನಂತಿತ್ತು. ವಿಷಯದ ಬಗ್ಗೆ ಪ್ರೀತಿಯಿತ್ತು, ಆದರೆ ಅರ್ಥೈಸಿಕೊಳ್ಳಲಾಗುತ್ತಿರಲಿಲ್ಲ. ನನಗೋ ನನ್ನ ನೋಟ್ಸನ್ನೆಲ್ಲ ಅವಳ ಮುಂದೆ ಸುರಿದುಬಿಡುವ ತವಕ. ಆದರೆ ಅವುಗಳಲ್ಲಿನ ಸೈನ್ ಥೀಟಾ, ಕಾಸ್ ಥೀಟಗಳೆಂಬ ಭೂತಗಳಿಗೆ ಹೆದರಿ ನನ್ನ ಬೆಂಬೀಳುತ್ತಿದ್ದ ಆಕೆಗೆ ನನ್ನ ತೀಟೆಗಳತ್ತ ಗಮನ ಹರಿಸುವದು ಸಾಧ್ಯವಾಗಲೇ ಇಲ್ಲ.
ಇಷ್ಟೆಲ್ಲ ಸಂಗತಿಗಳ ನಡುವೆಯೂ ,ಸಂತಸಗಳ ನಡುವೆಯೂ ,ನನ್ನಲ್ಲೊಂದು ಪುಟ್ಟ ವಿಷಾದವಿರುತ್ತಿತ್ತು. ನನ್ನ ಮತ್ತು ಅವಳ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲು ನಾನು ಪದೇ ಪದೇ ವಿಫ಼ಲನಾಗುತ್ತಿದ್ದೆ. ಹಾಗೆ ನೋಡಿದರೆ ಸಂಬಂಧವಿರುವವರೆಗೂ ಅದನ್ನು ಅರ್ಥೈಸಿಕೊಂಡು, ಅದಕ್ಕೊಂದು ಮುಖವಾಡ ತೊಡಿಸಲು ನಾನು ಯತ್ನಿಸಲೇ ಇಲ್ಲ. ನಮ್ಮ ನಡುವಿನ ಸ್ನೇಹಕ್ಕೆ ಯಾವುದೇ ಮಿತಿಯಿರಲಿಲ್ಲ, ವ್ಯಾಖ್ಯೆಯಿರಲಿಲ್ಲ, ಬಂಧನವಿರಲಿಲ್ಲ. ಅದೊಂದು ಸ್ವಚ್ಛಂದವಾದ, ಉಸಿರುಗಟ್ಟಿಸದ, ಒಡಂಬಡಿಕೆಗಳಿಲ್ಲದ, ಹೆಸರಿಲ್ಲದ ಜೀವಚೈತನ್ಯವಾಗಿತ್ತು.
ಪ್ರತಿಯೊಂದಕ್ಕೂ ಒಂದು ಆರಂಭವಿರುವಂತೆ, ಅಂತ್ಯವೂ ಇರುತ್ತದೆಂಬುದನ್ನೂ ನನಗೆ ಅವಳೇ ಗೊತ್ತುಪಡಿಸಬೇಕಾಯಿತು. ನಮ್ಮ ಮುಂದಿನ ದಾರಿ ಕಿರಿದಾಗತೊಡಗಿತ್ತು. ಅಲ್ಲಿ ಜೊತೆಯಾಗಿ ಹೆಜ್ಜೆ ಹಾಕಲು ಸಾಧ್ಯವಿರಲಿಲ್ಲ. ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ನಡೆಯುವ ತೀವ್ರತೆ ಆ ಸಂಬಂಧದಲ್ಲಿ ಇರಲಿಲ್ಲ ಎಂದೆನಿಸುತ್ತದೆ. ನನ್ನೆದೆಯ ಪ್ರೀತಿಯನ್ನೆಲ್ಲ ಸುರಿದು, ಆಕೆಯ ಬೊಗಸೆಯಲ್ಲಿಟ್ಟು, ತಿರುಗಿ ನೋಡಬಾರದೆಂಬ ಹಠಸಂಕಲ್ಪ ಹೊತ್ತು ಹೊರಟವನ ಕಣ್ಣುಗಳಲ್ಲಿ ಮಂಜಿನ ತೆರೆ. ಆಕೆಯು ಕೈ ಬೀಸಿ ನಮ್ಮ ಸಂಬಂಧಕ್ಕೊಂದು ವಿದಾಯ ಹಾಡುತ್ತಿದ್ದಂತೆ, ಯಾಂತ್ರಿಕವಾಗಿ ಪ್ರತಿಕ್ರಿಯಿಸಿದವನ ಮನಸ್ಸು ಮಾತ್ರ ರಚ್ಚೆ ಹಿಡಿದ ಮಗುವಿನಂತಾಗಿತ್ತು.
ಆದರೆ ನನಗೆ ಈ ಸಂಬಂಧದ ಶಾಶ್ವತತೆಯ ಅರಿವಾಗತೊಡಗಿತ್ತು. ನಾನು ಅಂದೇ ನಿರ್ಧರಿಸಿದೆ, ಈ ನೆನಪನ್ನು ನಾನು ನನ್ನ ಕೂಸೆಂಬಂತೆ ಬೆಳೆಸುತ್ತೇನೆ. ನನಗೆ ನಂಬಿಕೆಯಿತ್ತು, ನನ್ನ ಜೀವನದ ಪ್ರತೀ ಸಂಕಷ್ಟಕರ ಗಳಿಗೆಗಳಲ್ಲೂ ಈ ನೆನಪು ನನಗೆ ಬತ್ತದ ಉತ್ಸಾಹವನ್ನೂ, ಚಿರಯೌವನವನ್ನೂ, ಆತ್ಮವಿಶ್ವಾಸವನ್ನೂ, ಜೀವನಪ್ರೀತಿಯನ್ನೂ ಕೊಡುವುದೆಂದು. ಜೀವನದಲ್ಲಿ ಮೊದಲಬಾರಿಗೆ ನಾನು ಅಂದು ಬೆಳಕನ್ನರಸಿಕೊಂಡು ಹೋಗಿದ್ದೆ. ನನಗೆ ತಾರೆಯೇ ಸಿಕ್ಕಿತ್ತು. ಮತ್ತು ನಾನು ಅದನ್ನು ನನ್ನದಾಗಿಸಿಕೊಳ್ಳಲು ಯತ್ನಿಸಿದ್ದೆ. ಆದರೆ ಸತ್ಯ ಸಂಗತಿ ಕಣ್ಣಮುಂದೆಯೇ ಇತ್ತು. ನಾನೊಂದು ಗ್ರಹವಾಗಿದ್ದೆ. ನನ್ನಂತೆ ಅನೇಕ ಗ್ರಹಗಳು ಬೆಳಕನ್ನರಸಿಕೊಂದು ಆ ಚುಕ್ಕಿಯನ್ನು ಸುತ್ತುತ್ತಿದ್ದವು. ಆ ತಾರೆ ಮಾತ್ರ ಯಾವ ಬೇಧಭಾವವಿಲ್ಲದೆ ಎಲ್ಲ ಗ್ರಹಗಳ ಮೇಲೂ ಬೆಳಕು ಚೆಲ್ಲುತ್ತಿತ್ತು. ಆದರೂ ಯಾವುದೋ ಸಂಕ್ರಮಣ ಕಾಲದಲ್ಲಿ ನನ್ನ ಮೇಲೆ ಹೆಚ್ಚಿನ ಬೆಳಕು ಬಿದ್ದಿತ್ತೆಂದು ನನ್ನ ಅನಿಸಿಕೆ. ಆವತ್ತೇ ನಿರ್ಧರಿಸಿದೆ, ನಾನೂ ಚುಕ್ಕಿಯಾಗಬೇಕು. ನಭದಲ್ಲಿ ಸ್ವಚ್ಛಂದವಾಗಿ ವಿಹರಿಸುವ, ಯಾರ ಅಂಕೆಗೂ ನಿಲುಕದೆ ಸ್ವಶಕ್ತಿಯಿಂದ ಪ್ರಕಾಶಿಸುವ ತಾರೆಯಾಗಬೇಕು.