Saturday, February 5, 2011

Sunday, September 20, 2009

ಮತ್ತೆ ಮಳೆ ಹುಯ್ಯುತಿದೆ,ಎಲ್ಲ ನೆನಪಾಗುತಿದೆ









ಮಧುರ ನೆನಪುಗಳೇ ಹಾಗೆ.ಅವು ನಲ್ಲೆಯ ಹುಸಿಮುನಿಸಿನಂತೆ, ಹೊಸ ಮಳೆಯಿಂದ ತೊಯ್ದ ಮಣ್ಣಿನ ಘಮದಂತೆ, ಸಂಜೆಗಳಲ್ಲೊಮ್ಮೆ ಅರಳಿಬಿಡುವ ಬ್ರಹ್ಮ ಕಮಲದಂತೆ, ನಿದ್ದೆ ಹೋದ ಮಗುವಿನ ಮೊಗದಲ್ಲಿ ಲಾಸ್ಯವಾಡಿ ಕಣ್ಮರೆಯಾಗಿ ಹೋಗುವ ನಿಷ್ಕಲ್ಮಶ ನಗುವಿನಂತೆ,ಫಕ್ಕನೆ ಸುಳಿದು ಸುಂದರ ಅನುಭೂತಿಯನ್ನು ಮೂಡಿಸಿ ಕಣ್ಮರೆಯಾಗುತ್ತವೆ.
ಅವು ನೀಡುವ ಅನುಭವಗಳೂ ಅದ್ಭುತ.ಹಜಾಮನಿಗೊಪ್ಪಿಸಿದ ತಲೆಯಲ್ಲಿ ಕತ್ತರಿಯಾಡುತ್ತಿರುವಾಗ ಉಂಟಾಗುವ ಹಿತಕರವಾದ ಕೆರತದಂತೆ, ನೋವಿಲ್ಲದ ಹುಳುಕು ಹಲ್ಲಿನ ಮಧ್ಯೆ ನಾಲಿಗೆ ಓಡಾಡಿಸಿದಂತೆ, ಮೂರನೇ ಮಹಡಿಯ ಗ್ರಿಲ್ಲನ್ನೂ ದಾಟಿ ಒಳಬಂದುಬಿಡುವ ಕಳ್ಳ ಬೆಕ್ಕಿನಂತೆ, ಸದ್ದಿಲ್ಲದೆ ಮನಸ್ಸನ್ನಾವರಿಸಿಬಿಡುತ್ತವೆ. ಹಾಗೆಯೇ ಅವಳ ನೆನಪೂ ಸಹ ಒಂದು ಹಿತಕರವಾದ ಪೀಡೆಯಂತೆ ನನ್ನನ್ನು ಆಗಾಗ ಕಾಡುತ್ತಲೇ ಇರುತ್ತದೆ.

ಆಕೆ ಮತ್ತು ನಾನು ಒಂದೇ ದಿನ, ಒಂದೇ ಸಮಯದಲ್ಲಿ ಕಾಲೇಜು ಮೆಟ್ಟಿಲು ಹತ್ತಿದವರು. ಆದರೆ ವ್ಯತ್ಯಾಸವಿಷ್ಟೇ, ಆ ದಿನ ನಾನು ನೋಡಿದ್ದು ಕಾಲೇಜು ಮೆಟ್ಟಿಲನ್ನು ಮಾತ್ರ.ಆಕೆಯ ನೋಟ ಎಲ್ಲಿ ಹರಿದಾಡುತ್ತಿತ್ತೋ ನಾನಂತೂ ಅರಿಯೆ. ಹಾಗೇ ಒಂದೆರಡು ತಿಂಗಳುಗಳೇ ಸರಿದು ಹೋದವು. ಕೆಲವೊಮ್ಮೆ ಕಣ್ಣಭಾಷೆಗಳನ್ನು ಅರ್ಥೈಸಿಕೊಳ್ಳುವ ವ್ಯರ್ಥ ಪ್ರಯತ್ನ ನಡೆಸಿದ್ದು ಹೊರತುಪಡಿಸಿ ಯಾವುದೇ ಗುರುತರ ಸಾಧನೆಯಾಗಿರಲಿಲ್ಲ.ಹಾಗೆಂದು ಆಕೆಯೇನು ಅಸಾಮಾನ್ಯ ರೂಪಸಿಯಾಗಿರಲಿಲ್ಲ, ಜಂಭದ ಕೋಳಿಯಾಗಿರಲಿಲ್ಲ, ತುಂಬ ಬಿಂಕ ಬಿನ್ನಾಣಗಳೂ ಆಕೆಗಿರಲಿಲ್ಲ. ಆದರೆ ಆಕೆಯನ್ನು ಮಾತಾಡಿಸುವ ಧೈರ್ಯ ಅಥವಾ ಆ ಅವಶ್ಯಕತೆಯೇ ನನಗೆ ಬರಲಿಲ್ಲ. ಆಕೆಯದು ದೇವತೆಯ ಚೆಲುವು, ಮೊಗದಲ್ಲಿ ಸದಾ ಹಸನ್ಮುಖತೆ, ಪ್ರಶಾಂತತೆ. ಆಕೆ ನಿರಾಭರಣ ಸುಂದರಿ. ಒಮ್ಮೆ ನೆರಿಗೆ ಚಿಮ್ಮಿ ಕಾರಿಡಾರಿನಲ್ಲಿ ನಡೆಯುತ್ತಾ ಹೊರಟಳೆಂದರೆ ಮಾಲಿಯ ಅವಕ್ರಪೆಗೆ ಪಾತ್ರರಾಗಿ ಒಣಗಿ,ಸೊರಗಿ, ಸತ್ತುಹೋಗುವ ಸ್ಥಿತಿಯಲ್ಲಿದ್ದ ಹೂ ಗಿಡಗಳ ತುಂಬಾ ಬಣ್ಣಬಣ್ಣದ ಹೂಗಳು, ಚೆಂದಚೆಂದದ ಚಿತ್ತಾರಗಳು. ಹೀಗೆ ಯಾವ ಅನುಭವಕ್ಕೂ ಸಿಗದಂತೆ, ಯಾವ ಊಹೆಗೂ ನಿಲುಕದಂತೆ, ಮರೀಚಿಕೆಯಂತೆ ನನ್ನನ್ನು ಕಾಡಿದ ಅವಳು ಟ್ಯೂಶನ್ನಿನಲ್ಲೂ ದರ್ಶನವೀಯುತ್ತಾಳೆಂದೆಣಿಸಿರಲಿಲ್ಲ. ತನ್ನ ಜಂಭದ ಚೀಲದ ಜೊತೆಗೆ ನನ್ನ ಪಕ್ಕದಲ್ಲಿಯೇ ಬಂದು ಕುಳಿತಾಗ ನನಗೆ ದಿಗಿಲೋ ದಿಗಿಲು. ಆವತ್ತು ನಾನು ಮ್ಯೆ ಹಿಡಿಯಾಗಿಸಿಕೊಂಡು, ಪೆದ್ದು ಪೆದ್ದಾಗಿ ವರ್ತಿಸುತ್ತ ಕಳೆದ ಆ ಗಳಿಗೆ ನನಗೆ ಈಗಲೂ ಚೆನ್ನಾಗಿ ನೆನಪಿದೆ.

ಹೀಗೆ ದಿನಕಳೆಯುತ್ತಿದ್ದಂತೆ ನಮ್ಮ ಸ್ನೇಹ ಬೆಳೆಯುತ್ತ ಹೋಯಿತು. ವಿಚಿತ್ರವೆಂದರೆ ಆ ಸ್ನೇಹಕ್ಕಿನ್ನೂ ಮಾತಿನ ಕಳೆ ದೊರೆತಿರಲಿಲ್ಲ. ಚಿಕ್ಕ ಪುಟ್ಟ ಹಾಯ್, ಬಾಯ್, ಥ್ಯಾಂಕ್ಯೂಗಳಲ್ಲೇ ನಮ್ಮ ಮಾತುಕತೆ ಮುಗಿದುಹೋಗುತ್ತಿತ್ತು. ಆದರೆ ನನ್ನ ಪಾಲಿಗೆ ಅವು ತುಂಬ ಚೆಂದದ ದಿನಗಳಾಗಿದ್ದವು. ಈಗ ನನಗೆ ಕನ್ನಡಿಯಲ್ಲಿ ನನ್ನ ಪ್ರತಿಬಿಂಬ ಕಾಣುತ್ತಿತ್ತು. ಇದ್ದುದರಲ್ಲೆ ಒಪ್ಪಗಿನ ಬಟ್ಟೆಗಳಿಗೆ ಇಸ್ತ್ರಿ ಬೀಳಲಾರಂಭಿಸಿತ್ತು. ನನ್ನ ಸೈಕಲ್ಲಿನ ಮೇಲೆ ನನಗೆ ಅತೀವ ಪ್ರೀತಿಯುಂಟಾಗಿ ಸರ್ವಿಸಿಂಗಿಗೆಂದು ಅದು ಸಾಬಿಯ ಅಂಗಡಿ ಸೇರಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ನನ್ನಲ್ಲಿ ತುಂಬ ಮಟ್ಟಸ ಬರಲು ಪ್ರಾರಂಭವಾಗಿತ್ತು. ಯಾವಾಗಲೂ ಸೂರ್ಯವಂಶಿಯೇ ಆಗಿದ್ದ ನಾನು ಬೆಳ್ಳ್ಂಬೆಳಗ್ಗೆಯೇ ಎದ್ದು ಟ್ಯೂಶನ್ನಿನ ಸಮಯಕ್ಕೆ ಗಂಟೆಗಟ್ಟಲೆ ಮೊದಲೇ ಹೋಗಿ ತಿರುವಿನಲ್ಲಿ ಆಕೆಯ ದಾರಿ ನೋಡುತ್ತ ನಿಂತು ಬಿಡುತ್ತಿದ್ದೆ. ಇವತ್ತಿಗೂ ಅಷ್ಟು ಚೆಂದನೆಯ ಸೂರ್ಯೋದಯವನ್ನು, ಅಷ್ಟು ಒಳ್ಳೆಯ ಹುಡುಗಿಯನ್ನು ನೋಡಿದ ನೆನಪು ಕಣ್ಣಿನೊಳಪೊರೆಗಂಟಿದ ಚಿತ್ರದಂತಿದೆ.

ದೇವತೆಯೆಂದರೆ ಸಾಕೆ, ಬರಲು ಪಲ್ಲಕ್ಕಿ ಬೇಡವೇ? ಒಂದು ಚೆಂದನೆಯ ಸ್ಕೂಟಿಯೊಂದಿಗೆ ಆಕೆ ಬರುತ್ತಿದ್ದಳು. ತಿರುವಿನಲ್ಲಿ ನಿಂತ ನನ್ನನ್ನು ನೋಡಿದವಳೇ ಪ್ರತಿ ಬೆಳಗಿಗೂ ಒಲುಮೆಯ ಶುಭಾಷಯ ಹೇಳುತ್ತಿದ್ದಳು. ಅವಳ ಕಣ್ಣುಗಳಲ್ಲಿ ಥೇಟ್ ಮಗುವಿನ ಮುಗ್ಧತೆಯಿತ್ತು. ಕಣ್ಣಂಚಿನಲ್ಲಿ ತುಂಟತನವಿತ್ತು, ಜೊತೆಗೇ ಚಿಕ್ಕ ಜಗಳಗಂಟತನವಿತ್ತು.ಆಕೆಯ ಮುಗುಳ್ನಗೆ, ಆ ಕಣ್ಣಪ್ರೀತಿ ನನ್ನನ್ನು ಹುಚ್ಚನನ್ನಾಗಿಸುತ್ತಿತ್ತು. ನನ್ನ ಸೈಕಲ್ ಜೊತೆಗೂಡಿ ಸ್ಕೂಟಿ ಜಂಭದ ಹೆಜ್ಜೆಯಿಡುತ್ತಿದ್ದಾಗ ,ನಾನು ಆಕೆಯೊಡಗೂಡಿ ಹೆಜ್ಜೆ ಹಾಕುತ್ತಿದ್ದೆ. ಆ ದಿವ್ಯ ಮೌನಕ್ಕೆ, ಅದು ತಂದು ಕೊಡುತ್ತಿದ್ದ ಆತ್ಮ ಸಂತೋಷಕ್ಕೆ ನನ್ನ ಜೀವನವೇ ಮುಡಿಪು ಎಂದೆನಿಸುತ್ತಿತ್ತು. ಹಾಕಿದ ಪ್ರತಿಯೊಂದು ಹೆಜ್ಜೆಯೂ ನಮ್ಮಿಬ್ಬರ ಸ್ನೇಹವನ್ನೂ, ಸಂಬಂಧವನ್ನೂ ಧ್ರಡಪಡಿಸುತ್ತ ಹೋಗುತ್ತಿತ್ತು. ಮಾತಿಗೆ ಅಲ್ಲಿ ಯಾವ ಬೆಲೆಯೂ ಇರಲಿಲ್ಲ. ಮೌನವೇ ಮಾತಾಗಿತ್ತು.ಮಾತಿನ ಗೋಜಿಗೇ ಹೋಗದೆ ಪರಸ್ಪರರನ್ನು ಅರಿಯುವ ಕಲೆ ನಮಗೆ ಸಿಧ್ಧಿಸತೊಡಗಿತ್ತು. ಅಚ್ಚ ಬಿಳುಪಿನ ಕಪ್ಪು ಚುಕ್ಕಿಗಳ ಲಂಗದ ನೆರಿಗೆ ಚಿಮ್ಮುತ್ತ ಆಕೆ ನಡೆಯುತ್ತಿದ್ದರೆ ಥಟ್ಟನೆ ನೆನಪಗುತ್ತಿದ್ದುದು " ಬಂತು ಶ್ರಾವಣ, ಬಂತು ನಾಡಿಗೆ, ಬಂತು ಬೀಡಿಗೆ, ಬಂತು ಕಾಡಿಗೆ" ಎಂಬ ನನ್ನೆದೆಯ ಹಾಡು.

ಗೋಕುಲಾಷ್ಟಮಿಗೂ, ಇಮಾಮ್ ಸಾಬಿಗೂ ಎತ್ತಣ ಸಂಬಂಧ ಎಂಬಂತೆ ನಾನು ಕಪಿಯಾಗಿದ್ದವನು ಕವಿಯಾಗತೊಡಗಿದ್ದೆ. ನನ್ನ ನೋಟ್ಸಿನ ಮುನ್ನುಡಿ, ಬೆನ್ನುಡಿಗಳೆಲ್ಲ ಕವಿತೆಗಳೇ, ನನ್ನೊಲುಮೆಯ ಕನಸುಗಳೇ ಆಗಿರುತ್ತಿದ್ದವು. ಪ್ರತಿ ಪೇಜಿನಲ್ಲೂ ಚಿತ್ರ, ಪ್ರತಿ ಸಾಲಿನಲ್ಲೂ ಚಿತ್ತಾರ. ಹಾಗಾಗಿ ಪಠ್ಯ ವಿಷಯಗಳಿಗಿಂತ ಹೆಚ್ಚಾಗಿ ಹುಚ್ಚು ಮನಸಿನ ಹತ್ತು ಮುಖಗಳೇ ನೋಟ್ಸಿನ ತುಂಬ ತುಂಬಿ ಹೋಗಿರುತ್ತಿದ್ದವು. ಪಠ್ಯದ ವಿಷಯದಲ್ಲಿ ಆಕೆ ತುಂಬಾ ಜಾಣೆ. ಆದರೂ ಗಣಿತ ಅವಳ ಪಾಲಿಗೆ ನನ್ನಂತಿತ್ತು. ವಿಷಯದ ಬಗ್ಗೆ ಪ್ರೀತಿಯಿತ್ತು, ಆದರೆ ಅರ್ಥೈಸಿಕೊಳ್ಳಲಾಗುತ್ತಿರಲಿಲ್ಲ. ನನಗೋ ನನ್ನ ನೋಟ್ಸನ್ನೆಲ್ಲ ಅವಳ ಮುಂದೆ ಸುರಿದುಬಿಡುವ ತವಕ. ಆದರೆ ಅವುಗಳಲ್ಲಿನ ಸೈನ್ ಥೀಟಾ, ಕಾಸ್ ಥೀಟಗಳೆಂಬ ಭೂತಗಳಿಗೆ ಹೆದರಿ ನನ್ನ ಬೆಂಬೀಳುತ್ತಿದ್ದ ಆಕೆಗೆ ನನ್ನ ತೀಟೆಗಳತ್ತ ಗಮನ ಹರಿಸುವದು ಸಾಧ್ಯವಾಗಲೇ ಇಲ್ಲ.

ಇಷ್ಟೆಲ್ಲ ಸಂಗತಿಗಳ ನಡುವೆಯೂ ,ಸಂತಸಗಳ ನಡುವೆಯೂ ,ನನ್ನಲ್ಲೊಂದು ಪುಟ್ಟ ವಿಷಾದವಿರುತ್ತಿತ್ತು. ನನ್ನ ಮತ್ತು ಅವಳ ನಡುವಿನ ಸಂಬಂಧವನ್ನು ಅರ್ಥೈಸಿಕೊಳ್ಳಲು ನಾನು ಪದೇ ಪದೇ ವಿಫ಼ಲನಾಗುತ್ತಿದ್ದೆ. ಹಾಗೆ ನೋಡಿದರೆ ಸಂಬಂಧವಿರುವವರೆಗೂ ಅದನ್ನು ಅರ್ಥೈಸಿಕೊಂಡು, ಅದಕ್ಕೊಂದು ಮುಖವಾಡ ತೊಡಿಸಲು ನಾನು ಯತ್ನಿಸಲೇ ಇಲ್ಲ. ನಮ್ಮ ನಡುವಿನ ಸ್ನೇಹಕ್ಕೆ ಯಾವುದೇ ಮಿತಿಯಿರಲಿಲ್ಲ, ವ್ಯಾಖ್ಯೆಯಿರಲಿಲ್ಲ, ಬಂಧನವಿರಲಿಲ್ಲ. ಅದೊಂದು ಸ್ವಚ್ಛಂದವಾದ, ಉಸಿರುಗಟ್ಟಿಸದ, ಒಡಂಬಡಿಕೆಗಳಿಲ್ಲದ, ಹೆಸರಿಲ್ಲದ ಜೀವಚೈತನ್ಯವಾಗಿತ್ತು.

ಪ್ರತಿಯೊಂದಕ್ಕೂ ಒಂದು ಆರಂಭವಿರುವಂತೆ, ಅಂತ್ಯವೂ ಇರುತ್ತದೆಂಬುದನ್ನೂ ನನಗೆ ಅವಳೇ ಗೊತ್ತುಪಡಿಸಬೇಕಾಯಿತು. ನಮ್ಮ ಮುಂದಿನ ದಾರಿ ಕಿರಿದಾಗತೊಡಗಿತ್ತು. ಅಲ್ಲಿ ಜೊತೆಯಾಗಿ ಹೆಜ್ಜೆ ಹಾಕಲು ಸಾಧ್ಯವಿರಲಿಲ್ಲ. ಹೆಜ್ಜೆಯ ಮೇಲೆ ಹೆಜ್ಜೆಯನಿಟ್ಟು ನಡೆಯುವ ತೀವ್ರತೆ ಆ ಸಂಬಂಧದಲ್ಲಿ ಇರಲಿಲ್ಲ ಎಂದೆನಿಸುತ್ತದೆ. ನನ್ನೆದೆಯ ಪ್ರೀತಿಯನ್ನೆಲ್ಲ ಸುರಿದು, ಆಕೆಯ ಬೊಗಸೆಯಲ್ಲಿಟ್ಟು, ತಿರುಗಿ ನೋಡಬಾರದೆಂಬ ಹಠಸಂಕಲ್ಪ ಹೊತ್ತು ಹೊರಟವನ ಕಣ್ಣುಗಳಲ್ಲಿ ಮಂಜಿನ ತೆರೆ. ಆಕೆಯು ಕೈ ಬೀಸಿ ನಮ್ಮ ಸಂಬಂಧಕ್ಕೊಂದು ವಿದಾಯ ಹಾಡುತ್ತಿದ್ದಂತೆ, ಯಾಂತ್ರಿಕವಾಗಿ ಪ್ರತಿಕ್ರಿಯಿಸಿದವನ ಮನಸ್ಸು ಮಾತ್ರ ರಚ್ಚೆ ಹಿಡಿದ ಮಗುವಿನಂತಾಗಿತ್ತು.

ಆದರೆ ನನಗೆ ಈ ಸಂಬಂಧದ ಶಾಶ್ವತತೆಯ ಅರಿವಾಗತೊಡಗಿತ್ತು. ನಾನು ಅಂದೇ ನಿರ್ಧರಿಸಿದೆ, ಈ ನೆನಪನ್ನು ನಾನು ನನ್ನ ಕೂಸೆಂಬಂತೆ ಬೆಳೆಸುತ್ತೇನೆ. ನನಗೆ ನಂಬಿಕೆಯಿತ್ತು, ನನ್ನ ಜೀವನದ ಪ್ರತೀ ಸಂಕಷ್ಟಕರ ಗಳಿಗೆಗಳಲ್ಲೂ ಈ ನೆನಪು ನನಗೆ ಬತ್ತದ ಉತ್ಸಾಹವನ್ನೂ, ಚಿರಯೌವನವನ್ನೂ, ಆತ್ಮವಿಶ್ವಾಸವನ್ನೂ, ಜೀವನಪ್ರೀತಿಯನ್ನೂ ಕೊಡುವುದೆಂದು. ಜೀವನದಲ್ಲಿ ಮೊದಲಬಾರಿಗೆ ನಾನು ಅಂದು ಬೆಳಕನ್ನರಸಿಕೊಂಡು ಹೋಗಿದ್ದೆ. ನನಗೆ ತಾರೆಯೇ ಸಿಕ್ಕಿತ್ತು. ಮತ್ತು ನಾನು ಅದನ್ನು ನನ್ನದಾಗಿಸಿಕೊಳ್ಳಲು ಯತ್ನಿಸಿದ್ದೆ. ಆದರೆ ಸತ್ಯ ಸಂಗತಿ ಕಣ್ಣಮುಂದೆಯೇ ಇತ್ತು. ನಾನೊಂದು ಗ್ರಹವಾಗಿದ್ದೆ. ನನ್ನಂತೆ ಅನೇಕ ಗ್ರಹಗಳು ಬೆಳಕನ್ನರಸಿಕೊಂದು ಆ ಚುಕ್ಕಿಯನ್ನು ಸುತ್ತುತ್ತಿದ್ದವು. ಆ ತಾರೆ ಮಾತ್ರ ಯಾವ ಬೇಧಭಾವವಿಲ್ಲದೆ ಎಲ್ಲ ಗ್ರಹಗಳ ಮೇಲೂ ಬೆಳಕು ಚೆಲ್ಲುತ್ತಿತ್ತು. ಆದರೂ ಯಾವುದೋ ಸಂಕ್ರಮಣ ಕಾಲದಲ್ಲಿ ನನ್ನ ಮೇಲೆ ಹೆಚ್ಚಿನ ಬೆಳಕು ಬಿದ್ದಿತ್ತೆಂದು ನನ್ನ ಅನಿಸಿಕೆ. ಆವತ್ತೇ ನಿರ್ಧರಿಸಿದೆ, ನಾನೂ ಚುಕ್ಕಿಯಾಗಬೇಕು. ನಭದಲ್ಲಿ ಸ್ವಚ್ಛಂದವಾಗಿ ವಿಹರಿಸುವ, ಯಾರ ಅಂಕೆಗೂ ನಿಲುಕದೆ ಸ್ವಶಕ್ತಿಯಿಂದ ಪ್ರಕಾಶಿಸುವ ತಾರೆಯಾಗಬೇಕು.

Saturday, September 12, 2009

ಶ್ರದ್ಧಾಂಜಲಿ


ಅಂದು ಮನೆಯೊಳಗೆ ಕಾಲಿಟ್ಟಾಗ ಅಡರಿದ್ದು ಶುದ್ಧ ಸಾವಿನ ವಾಸನೆ.ಸಂಜೆ ಏಳರ ಸಮಯ,ದೀಪವಾರುವ ಹೊತ್ತಾ?

ಹತ್ತಿರ ಹೋದಾಗ ಕಂಡಿದ್ದು ಸಂತ್ರಪ್ತ ಕಂಗಳು.ಮಾಡದೇ ಉಳಿದ ಕೆಲಸ ನೆನಪಾಗಿರಬೇಕು,ನನ್ನ ಕಾಣುತ್ತಿದ್ದಂತೆ "ಸದೂಂಗೆ ಒಲೆಗೆ ಮಣ್ಣು ಹಾಕಲೆ ಹೇಳೊ..ತಮಾ" ಎಂದು ಕನವರಿಸತೊಡಗಿದಳು.ಜೊತೆಗೇ ಗಂಟಲಾಳದಿಂದ ಹೊರಬರುತ್ತಿದ್ದ ವಿಚಿತ್ರ ಗೊರ ಗೊರ ಸದ್ದು.ಕರೆಂಟ್ ಬೇಲಿ ಷಾಕಿನಿಂದ ಪರಲೋಕವಾಸಿಯಾಗಿ,ಬೇಲಿಗೆದುರಾಗಿ ಉಚ್ಚೆ ಹೊಯ್ಯುವಾಗಲೆಲ್ಲ ನೆನಪಾಗುತ್ತಿದ್ದ ನನ್ನ ಪ್ರೀತಿಯ ಕಾಕ ಸತ್ತು ಅವತ್ತಿಗಾಗಲೇ ಇಪ್ಪತ್ತು ವರುಷಗಳ ಮೇಲಾಗಿತ್ತು.ನನಗೆ ತುಂಬ ಹೆದರಿಕೆಯಾಗಿ ಕೂಡಲೇ ಅಪ್ಪಯ್ಯನನ್ನು ಕೂಗಿ ಕರೆದಿದ್ದೆ.

ಆ ದಿನ ಒಂದು ಸುಂದರ ಸಾವನ್ನು ತುಂಬ ಹತ್ತಿರದಿಂದ ನೋಡಿದ್ದೆ.ಸಾವೂ..ಸುಂದರವೇ?ಇವನಿಗೆಲ್ಲೋ.ಅರಳು-ಮರಳೆಂದು ನಿಮಗನಿಸಬಹುದು.ಆಕೆಯ ತುಂಬು ಜೀವನ ಪ್ರೀತಿ,ಆಕೆ ಸಾವನ್ನೆದುರುಗೊಂಡ ರೀತಿ..ಇವೆರಡನ್ನೂ ನೋಡಿದ ನನಗೆ ಇದು ಅತಿಶಯೋಕ್ತಿ ಎನಿಸುವದಿಲ್ಲ.ಕತ್ತು ವಾಲಿದ ಮೊಗದಲ್ಲಿ ಪ್ರಸನ್ನತೆಯ ನತ್ತು.ಅಕೆಯ ಅಪ್ಪುಗೆಗೆ ಸಿಲುಕಿದ ಸಾವಂತ ಸಾವಿಗೂ..ಆ ಕ್ಷಣ ಬದುಕಬೇಕು ಎನ್ನಿಸಿರಬೇಕು.ಬದುಕಿನ ಸಿದ್ಧತೆ,ಅದು ಅನಿವಾರ್ಯತೆ..ಸಾವೋ ಸಮಾನತೆಯ ಪ್ರತೀಕ.ಸಾವು ಕದತಟ್ಟುತ್ತಿದ್ದಾಗ,"ನಾಳೆ ಬಾ" ಬರಹಕ್ಕೆಲ್ಲಿದೆ ಅರ್ಥ ?

ಆಕೆ ಬದುಕಿದ್ದೇ ಹಾಗೆ,ಬದುಕಿನಂತೆ.ಆಕೆ ಸಾವನ್ನೆದುರುಗೊಂಡ ರೀತಿ,ಅಕೆಯ ಬದುಕಿಗೆ ಹಿಡಿದ ಕನ್ನಡಿ.ಜೀವನದುದ್ದಕ್ಕೂ ಅನುಭವಿಸಿದ ಬವಣೆ,ಅವಮಾನ,ಬಡತನ ಇವೆಲ್ಲವುಗಳ ಹೊರತಾಗಿಯೂ ಬದುಕಿನ ಬಗ್ಗೆ ಆಕೆಯದು ಒಮ್ಮುಖ ಪ್ರೀತಿ.ಸಾವೆಂಬ ಒಲ್ಲದ ಗಂಡ ಕೈ ಹಿಡಿದಾಗಲೂ ಅಕೆಯ ಕಣ್ಣಲ್ಲಿದ್ದುದು ಅದೇ ಬದುಕಿನ ಆರಾಧನೆ.ಆಕೆ ನನ್ನನ್ನು ವಿಸ್ಮಿತಗೊಳಿಸುವದು ಸಹಾ ಅದೇ ಜೀವನ ಪ್ರೀತಿ ಹಾಗು ಸಾವಿನೆಡೆಗಿನ ದಿವ್ಯ ನಿರ್ಲಕ್ಷ್ಯದಿಂದ.

ಆಕೆಯ ನೆನಪು ಕಾಡುತ್ತಲೇ ಇರುತ್ತದೆ ಬದುಕಿರುವವರೆಗೂ.ಕಣ್ಣಂಚು ತನಗರಿವಿಲ್ಲದೆ ತೇವಗೊಳ್ಳುತ್ತದೆ.ಕಾಡುತ್ತವೆ ಆಕೆಯ ತಿಳಿ ಹಸಿರು ಸೀರೆ,ಅದರ ಮೇಲಿನ ಚಿಕ್ಕ ಕಪ್ಪು-ಹಳದಿ ಚುಕ್ಕೆಗಳು,ಆಕೆಯ ಮಡಿಲು,ಮುಖದ ಸುಕ್ಕು,ಕೈಯ ಹಸಿರು ನರ,ಚಿನ್ನದ ಲೇಪದ ಗುಂಡುಗಳ ಪೋಣಿಸಿ ಮಾಡಿದ ಮಿಶ್ರ ಲೋಹದ ಸರ,ದಂತದ ಬಣ್ಣದ ಬಾಚಣಿಗೆ,ಅದರಲ್ಲಿ ಸಿಕ್ಕಿ ಬಿದ್ದ ಬೆಳ್ಳಿಗೂದಲು,ಆ ಮಂಚ,ಮಂಚದ ಪ್ರತಿ ಹಲಗೆ,ಹಲಗೆಯ ಪ್ರತಿ ಬಿರುಕು,ಮೂರನೆಯ ಹಲಗೆಯಡಿಯ ಸಂದಿನಲ್ಲಿ,ತಲೆಬದಿಗಿರುತ್ತಿದ್ದ ತಂಬಾಕಿನ ಎಸಳು,ಕಂದುಗಟ್ಟಿದ ವಸಡುಗಳ ಮಧ್ಯೆ ಕೆಂಪಡಿಕೆಯ ಹೋಳು.

"ಮಾಣಿ,ಬಿಸ್ಲಲ್ಲಿ ಒಂದು ಗಳಿಗೆ ಮನಕ್ಯಂಡ್ರೆ ಆಗ್ತಿಲ್ಯ..ಕೂಳೊಂದು ತಿಂಬದು,ಬಟಾರೆದ್ದು ಓಡದು.ಮಕಾ ಹೇಳದು ಕರೀ ಇಂಗಾಳಾಜು,ತಲಿಗಂತೂ ಒಂದು ಹನಿ ಎಣ್ಣೆ ಹೇಳಿ ಕಾಣ್ಸದಿಲ್ಲೆ,ಯಂಕಟು ಬರ್ಲಿ,ಮಾಡ್ಸ್ಗೊಡ್ತಿ"..ಈ ಹುಸಿ ಬೆದರಿಕೆಯನ್ನರಿಯದವನೇ ನಾನು?ಎಣ್ಣೆ ಹಾಕದಿದ್ದರೂ ಆಕೆ ನೆನಪಾಗುತ್ತಾಳೆ.

"ನನ್ನ ಅಮ್ಮನಿಗೆ ಹೊಗೆಸಪ್ಪು ತಂದು ಕೊಟ್ಟೆನೆಂದು" ಬರೆದಿದ್ದ ಒಳ್ಳೆ ಕೆಲಸದ ಪಟ್ಟಿ,ಅದರಿಂದ ಕೆಂಪಾದ ಕಿವಿ ಎಲ್ಲವೂ ನನ್ನಲ್ಲಿ ಕಿರುನಗೆ ಮೂಡಿಸುತ್ತವೆ.ಕೊಟ್ಟ ಎರಡು ರುಪಾಯಿಯಲ್ಲಿ,ಒಂದು ಎಂಭತ್ತು ಹೊಗೆಸಪ್ಪಿನೆಸಳಿಗೆ,ಹತ್ತು ಪೈಸೆಯ ಹುರಿಗಡಲೆ ಅಥವಾ ಸಿಗರೇಟಿನ ಪೆಪ್ಪರಮೆಂಟು, ಉಳಿದ ಹತ್ತು ಪೈಸೆ ನನ್ನ ಬುಗುರಿಯಾಕಾರದ ನಾಣ್ಯದ ಹುಂಡಿಗೆ.ಕೂಡಿ ಕಳೆಯುವ ಲೆಕ್ಕಾಚಾರ,ಕಳೆದು ಕೂಡುವ ಸಂತಸ.ಗಣೀತದ ಭೂತದಿಂದ ನನ್ನನ್ನು ಕಾಪಾಡಿದ್ದು ಆಕೆಯೇ ಅಲ್ಲವೇ?

ಕಟ್ಟುವ ಪರಿಕಲ್ಪನೆ ಒಡಮೂಡಿದ್ದು ಸಹಾ,ಅಪ್ಪ ಮತ್ತು ಆಕೆ ಸೇರಿ ಕಟ್ಟಿದ ಮಣ್ಣಿನ ಗೋಡೆಯ ಕಾರ್ಯದಲ್ಲಿ ಸಲ್ಲಿಸಿದ ಅಳಿಲು ಸೇವೆಯಿಂದಲೆ.ಮನದ ಗೋಡೆ ಎಬ್ಬಿಸಿಕೊಂಡಷ್ಟು ಸುಲಭದ್ದಲ್ಲ ಆ ಕೆಲಸ.ಎಲ್ಲಿಂದಲೋ ಅಮರಿಕೊಂಡ ಕೆಟ್ಟ ಜ್ವರ,ಗಂಟಲಾಳವನ್ನು ಸೀಳಿಕೊಂಡು ಬರುತ್ತಿದ್ದ ನಾಯಿಕೆಮ್ಮು,ನೆಕ್ಕಿಸುತ್ತಿದ್ದ ಸಕ್ಕರೆ ನಿಂಬೆಯ ಮಿಶ್ರಣ, ಕಣ್ಣಿಗೆ ಕಾಣದಂತೆ ಸೀರೆಯ ಅಂಚಿಂದ ಒರೆಸಲ್ಪಡುತ್ತಿದ್ದ ಮೂಗಿನ ತುದಿ ಇವೆಲ್ಲವುಗಳಲ್ಲಿ ಆಕೆ ಮತ್ತೆ ಮತ್ತೆ ನೆನಪಾಗುತ್ತಾಳೆ.
ಇಂಗಾಳ,ಲವಂಗ,ಕರ್ಪೂರ,ಸ್ವಲ್ಪ ಲವಣ,ಹುರಿದ ಕರಿಬೇವುಗಳನ್ನೆಲ್ಲ ಸೇರಿಸಿ ನಾನು ಮಾಡಿಕೊಟ್ಟ "ದಂತ ಮಂಜನ" ಆಕೆಗೆ ನಾ ಕೊಟ್ಟ ಚೆಂದದ ಗಿಪ್ಟು.

ಒಳಮನೆಯ ಕತ್ತಲಿನ ನಸು ಹಳದಿ ಬಾಳೆ ಗೊನೆ,ಅಂಗಳದ ಮಿಡಿ ಸವತೆ,ಹಿತ್ತಲಿನ ಪೇರಲ.ಕದ್ದು ತಿಂದವರಾರು ಎಂಬ ಗುಟ್ಟಿನ ವಿಷಯ ಪಾಲುದಾರಳ ಹೊರತು ಗೊತ್ತಿಲ್ಲ ಯಾರಿಗೂ.

ಅಂಗಳದ ಆ ಕಟ್ಟೆ,ಕಟ್ಟೆಯಂಚಿನ ಕಳೆ,ಕಿತ್ತವರು ಯಾರು ಹೇಳೆ ವೀಳ್ಯದ ಎಲೆ.
ತುಕ್ಕು ತಗಡಿನ ಮೇಲೆ ಸುಟ್ಟ ಗೇರು ಬೀಜ,ಅಚ್ಚಬಿಳುಪಿನಂಗಿಯ ಕಂದು ಚುಕ್ಕಿಯ ಕಲೆ.
ಹದವಾದ ಬಿಸಿ ನೀರು,ಸುಡುವ ಬಚ್ಚಲ ಒಲೆ,ಒರೆಸಿದ್ದು ನನ್ನ ತಲೆ,ಎಲ್ಲಿ ನಿನ್ನಯ ನೆಲೆ ?




Saturday, August 1, 2009

ಜ್ವರಾರಾಧನೆ

ತುಂಬ ದಿನಗಳ ನಂತರ ಆಕೆಗೆ ನನ್ನ ನೆನಪಾಗಿತ್ತು.ನನಗೊಂದು ಸುಳಿವನ್ನೂ ನೀಡದೆ ನನ್ನನ್ನು ಎದುರುಗೊಂಡು ನನ್ನ ಕಂಗಳ ಬೆರಗನ್ನು ಕಾಣಬೇಕೆಂಬುದು ಅವಳ ಆಸೆಯಾಗಿತ್ತಾದರೂ,ನನ್ನೊಲವಿನ ಜಾಡನ್ನರಿಯದ ಅರಸಿಕ ನಾನೇ ?

ಆಕೆ ಬರುತ್ತಿದ್ದಾಳೆಂಬುದು ಆತ್ಮ ಸಾಕ್ಷಿಗೆ ಗೊತ್ತಿದ್ದರೂ..ಎಲ್ಲಿ,ಹೇಗೆ,ಯಾವಾಗ ಅವಳನ್ನು ಎದುರುಗೊಳ್ಳುತ್ತೇನೆಂಬುದು ಇನ್ನೂ ಸ್ಪಷ್ಟವಾಗಿರಲಿಲ್ಲ.ಏಂದೂ ಇಲ್ಲದ ಉದ್ವೇಗ ಮನವನ್ನಾವರಿಸಿಕೊಂಡಿತ್ತು.ಅಕೆಯೊಡಗೂಡಿ ಕಳೆದ ಮಢುರ ನೆನಪುಗಳಿಂದ ಅದಾಗಲೇ ಮೈ ಬಿಸಿಯೇರತೊಡಗಿತ್ತು. ವಿರಹ ತಾಪದಿಂದ ಪರಿತಪಿಸುತ್ತಿದ್ದ ಮನದ ತುಂಬ ಆಕೆಯದೇ ಬಿಂಬ.ಪರದೇಸಿಪುರದಲ್ಲಿ ನನ್ನವಳು ನನ್ನನ್ನಾವರಿಸಿಕೊಳ್ಳುವ ಸೂಚನೆ ಸಿಕ್ಕಿದ್ದೇ ತಡ,ತುಂಬು ಸಂಭ್ರಮದಿಂದ ಬರಮಾಡಿಕೊಂಡೆ.

ಆಷಾಢ ಕಳೆಯುವುದನ್ನೇ ಕಾಯುತ್ತಿದ್ದ ಅವಳೂ ಸಹ ನನ್ನನ್ನು ಆವರಿಸಿಕೊಂಡ ಪರಿಯಿದೆಯಲ್ಲ.. ಮೂರು ದಿನ ಹಗಲು-ರಾತ್ರಿ ಅನುಭವಿಸಿದ ಆ ಬಿಸಿಯಪ್ಪುಗೆ...ಬಿಡಿ, ಹಸಿ ಅನುಭವಗಳ ಬಿಸಿ ಬಿಸಿ ವರ್ಣನೆಗೆ ಪದಗಳ ಹಂಗೇಕೆ ?
ನಮ್ಮಿಬ್ಬರ ಏಕಾಂತಕ್ಕೆ ಭಂಗ ತರಬಾರದೆಂಬ ಸದುದ್ದೇಶದಿಂದ ನನ್ನ ರೂಮಿನತ್ತ ಯಾರೂ ಸುಳಿದಿರಲಿಲ್ಲ.ನಾನೂ ಸಹಾ ಆಕೆಯ ದಿವ್ಯಸಾನಿಧ್ಯದಲ್ಲಿ ಉನ್ಮತ್ತನಾಗಿ ಮೈಮರೆತಿದ್ದೆ.ಪ್ರಪಂಚದ ಅರಿವು ಇಬ್ಬರಿಗೂ ಇರಲಿಲ್ಲ.ಅವಳು ಬಳಿಯಿರಲು..ಯಾವುದು ಹಗಲೋ?ಯಾವುದು ರಾತ್ರಿಯೋ?ಸಮಯದ ಪರಿಕಲ್ಪನೆ ಬುಧ್ಧಿಗೆ ನಿಲುಕದಾಗಿತ್ತು.

ಆಕೆಯ ಉನ್ಮಾದಕ್ಕೋ ಸುನಾಮಿಯ ಸೊಕ್ಕು.ಅದೇ ಚಂಚಲತೆ,ಅದೇ ವೇಗ,ಎಲ್ಲವನ್ನೂ ತನ್ನೊಳಗೆಳೆದುಕೊಳ್ಳಬೇಕೆಂಬ ದಾಹ.ಬೆರಗಾದ ನನ್ನ ಮೈಮನಕ್ಕೆ ಕೊಚ್ಚಿಹೋಗುತ್ತಿದ್ದೇನೆಂಬ ಅರಿವಿದ್ದರೂ..ತಪ್ಪಿಸಿಕೊಳ್ಳಬೇಕೆಂಬ ಛಲವಿರಲಿಲ್ಲ. ಆ ಅಬ್ಬರದಲ್ಲಿ ಕಳೆದುಹೋಗಬಯಸುತ್ತಿದ್ದೆ.ಕಿಬ್ಬೊಟ್ಟೆಯಾಳದೊಳಗೆಲ್ಲೋ ಹತ್ತಿದ ಕಿಡಿಗೆ ಮೈಯೆಲ್ಲ ಬೆವರ ಹನಿ,ಆಕೆಯದೇ ಘಮ.ಇಷ್ಟೆಲ್ಲ ದಿನದ ಒಂಟಿತನ,ವೇದನೆ,ಆಸೆ,ಉನ್ಮಾದಗಳನ್ನೆಲ್ಲ ಹೀಗೆ ಒಮ್ಮೆಲೇ ಭೋರ್ಗರೆದು ತೀರಿಸಿಕೊಳ್ಳಬೇಕೇನೇ? ನಿನ್ನ ಮೋಹಪಾಶಕ್ಕೆ ಸವಾಲೊಡ್ಡುವ ಅಸ್ತ್ರವೆಲ್ಲಿದೆ ಹೇಳು?ನಾನೆಂದೂ ನಿನ್ನವನೇ ಅಲ್ಲವೇನೇ? ಅದು ಬಿಡು,ವಸ್ತ್ರವೆಲ್ಲಿದೆ ಹೇಳು?

ನನ್ನ ಮೇಲೆ ಸಲ್ಲದ ಸಂಶಯ ಪಡದಿರು.ನಿನ್ನ ಜೊತೆ ಕಳೆದ ಪ್ರತಿ ನಿಮಿಷ,ಆಡಿದ ಪ್ರತಿ ಮಾತು,ಹೊರಳಿದ ಪ್ರತಿ ಹೊರಳು,ಮೂಡಿದ ಪ್ರತಿ ಸುಕ್ಕು ಇವೆಲ್ಲವುಗಳ ಪ್ರಮಾಣ ಮಾಡಿ ಹೇಳುತ್ತೇನೆ ಕೇಳು,ನಿನ್ನ ಹೊಕ್ಕುಳ ಮಚ್ಚೆ ನನ್ನ ಹುಚ್ಚೆಬ್ಬಿಸುತ್ತದೆ.

ಸಂಕವಿಲ್ಲದ ತೊರೆ,ಸುಂಕ ಕೊಟ್ಟು ದಾಟಬೇಕಿದೆ,ದಯವಿರಲಿ.

Sunday, December 23, 2007

ಸ್ಟಿಕ್ಕರ್ ಹಚ್ಚಿದ ಹಣ್ಣುಗಳು

ಮೊದಲ ಬಾರಿ ಬೆಣ್ಣೆ ಹಣ್ಣಿನ ಗಿಡ ನೋಡಿದಾಗ, ನನಗೆ ಆರೋ,ಏಳೋ ವಯಸ್ಸು.ಅಮ್ಮ ಅಮ್ಮಚ್ಚಿಯಿಂದಲೋ,ಹಳೆಮನೆಯಿಂದಲೋ ಆ ಗಿಡವನ್ನು ಮುಚ್ಚಟೆಯಲ್ಲಿಟ್ಟುಕೊಂಡು ತಂದಿದ್ದಳು.ಹಸಿರಾದ ಉದ್ದನೆಯ ಎಲೆಗಳು,ಚಿಕ್ಕದಾದರೂ ಬಲಿಷ್ಠವಾದ ಕಾಂಡ,ಅದರ ಒಟ್ಟಾರೆ ಆಕಾರ ನನ್ನಲ್ಲಿ ಅದಮ್ಯ ಕುತೂಹಲಕ್ಕೆ ಎಡೆ ಇತ್ತಿತು.ಅದರ ಮೇಲೆ,ಹಣ್ಣಿನ ರುಚಿ,ಬಣ್ಣ,ಮ್ರದುತನದ ಬಗ್ಗೆ ಅಮ್ಮನದು ಮುಗಿಯದ ವರ್ಣನೆ."ಮೊದ್ಲೆಲ್ಲ ಕಾನ್ಗೀನಲ್ಲೆಲ್ಲ ಸೊಕಾಗಿ ಬೆಳ್ಯದು,ಈಗಾ ಔಷಧಿಗೆ ಬೇಕೂ ಅಂದ್ರೂ ಸಿಗ್ತಿಲ್ಲೆ" ಅಂತ ಅಮ್ಮ ಹೇಳಿದ ಮೇಲಂತೂ ಒಂದು ಭಾರಿ ನಿಧಿ ಸಿಕ್ಕ ಖುಷಿ ನನಗೆ.

ಮರುದಿನ ಭಾನುವಾರ ಅಪ್ಪಯ್ಯನ ಜೊತೆಗೂಡಿ,ವಿಚಿತ್ರ ಸಂಭ್ರಮದಿಂದ ಗಿಡವನ್ನು ನೆಟ್ಟಿದ್ದೂ ಆಗಿ ಹೋಯಿತು.ದಿನೇ ದಿನೇ ಆ ಗಿಡವೂ ಸಹಾ ನನ್ನಂತೆಯೇ ಬೆಳೆಯಲಾರಂಭಿಸಿತು.ಅಲ್ಲಿಯ ತನಕ ನನ್ನ ತುಂಟಾಟಕ್ಕೋ,ಕಾಲ್ತುಳಿತಕ್ಕೋ,ಚೆಂಡಿನ ಅಬ್ಬರಕ್ಕೋ ಸಿಲುಕಿ ಪಕಳೆ ಉದುರಿಸಿಕೊಂಡು ನಿಂತ ಹೂಗಿಡಗಳಿಗೆಲ್ಲ ಈ ಬೆಣ್ಣೆಹಣ್ಣಿನ ಗಿಡವನ್ನು ಕಂಡರೆ ಸವತಿ ಮತ್ಸರ.ನನಗೋ ಅದು ಯಾವಾಗ ಹಣ್ಣು ಬಿಟ್ಟೀತೆಂಬ ಕಾತುರ.ಹೀಗೆ ಒಬ್ಬರಿಗೊಬ್ಬರು ಸ್ಪರ್ಧಿಗಳಂತೆ,ನಾನು ಮತ್ತು ನನ್ನ ಬೆಣ್ಣೆಹಣ್ಣಿನ ಗಿಡ ಬೆಳೆಯುತ್ತಲೇ ಹೋದೆವು.

ಆವತ್ತು ಅಪ್ಪಯ್ಯನಿಗೆ ಭಾರೀ ಖುಷಿ;"ನಮ್ಮನೆ ಮಾಣಿಗೆ ಬೆಂಗಳೂರ್ ಕಾಲೇಜ್ನಲ್ಲಿ ಸೀಟ್ ಸಿಕ್ಕಿದ್ದು,ಅವನೂ ಇನ್ಮುಂದೆ ಇಂಜಿನ್ದಾರ ಆಪವ್ನೆಯ ಗೊತ್ತಿದ್ದ",ಎಂದು ಅಮ್ಮನ ಬಳಿ ಹೇಳುತ್ತಿದ್ದ.ಆದರೆ ನನ್ನ ಸಂಭ್ರಮಕ್ಕೆ ಕಾರಣ ಬೇರೆಯೇ ಇತ್ತು.ಇತ್ತೀಚೆಗಷ್ಟೆ ಗೊಡ್ಡು ಗಿಡವೆಂದು ತಿರಸ್ಕರಿಸಲ್ಪಟ್ಟಿದ್ದ ಬೆಣ್ಣೆಹಣ್ಣಿನ ಗಿಡದಲ್ಲಿ ನಾನು ಹೂವನ್ನು,ಚಿಕ್ಕ ಹೀಚುಗಾಯಿಯಂತಹದೇನನ್ನೋ ಆ ದಿನ ಕಂಡಿದ್ದೆ. ಬೆಣ್ಣೆಹಣ್ಣು ತಿನ್ನುವ ಅದೃಷ್ಟ ನನಗೆ ಕಡೆಗೂ ಕೂಡಿ ಬರಲಿಲ್ಲ.ಆದರ ನೆನಪಿನೊಂದಿಗೆ ಬೆಂಗಳೂರಿಗೆ ಹೋಗುವ ಬಸ್ಸನ್ನೇರಿ ಕುಳಿತವನ ಬಳಿ ಬಂದು ಅಪ್ಪಯ್ಯ ಹೇಳಿದ್ದ"ಮಾಣಿ,ಬೇಜಾರಾಗಡ,ಹಣ್ಣಾದ್ಕೂಡ್ಲೆ ನಿಂಗೆ ನಾನೇ ಪಾರ್ಸಲ್ ಮಾಡಿ ಕಳ್ಸ್ಗೊಟ್ಟರೆ ಆತ ಇಲ್ಯ?".

ಹೀಗೆ ಬೆಣ್ಣೆಹಣ್ಣಿನ ನೆನಪು ಬೆಂದಕಾಳೂರ ಬಾಲೆಯರ ನಡುವೆ ಮಾಸಿ ಹೋಗುತ್ತಿರಲು,ಒಂದು ದಿನ ಅಪ್ಪಯ್ಯನಿಂದ ಫೋನು ಬಂತು.ಎಲ್ಲ ಕುಶಲ,ಕ್ಷೇಮ ಸಮಾಚಾರಗಳಾದೊಡನೆ,ಅಪ್ಪಯ್ಯ ಹೇಳ್ದ "ಮಾಣಿ,ಒಂದ,ಎರಡ ಕಾಯಷ್ಟೆ ಕಚ್ಗಂಡಿತ್ತು ಮಾರಾಯ;ಮೊನ್ನೆ ಯಾರೋ ಕಲ್ಲು ಹೊಡ್ದು ಅದನ್ನು ಇಲ್ಲೆ ಮಾಡಿಗಿದ.ಆ ಮ್ಯಾಲಿನ್ ಮನೆ ಸಾಬರ ಹುಡ್ಗನ್ದೆ ಕೆಲ್ಸ ಅದು.ಕೆರೆ ಬದಿಗೆ ಹೋಗಕಾದ್ರೆ ಕೈ ಸುಮ್ನಿರ್ತಿಲ್ಲೆ ಕಾಣ್ತು.ಮತ್ಯಾರು ಬತ್ತ ಇಲ್ಲಿ?"

ನನ್ನ ಸ್ನೇಹಿತರ,ಸೆಮೆಸ್ಟರ್ ಗಳ,ಇಂಟರ್ನಲ್ ಗಳ ಗದ್ದಲದಲ್ಲಿ ನಾಲ್ಕನೆ ಸೆಮೆಸ್ಟರನ್ನು ನಾನು ತಲುಪಿಬಿಟ್ಟಿದ್ದೆ.ಬೆಣ್ಣೆಹಣ್ಣಿನ ಗಿಡದ ನೆನಪೂ ನಿಧಾನವಾಗಿ ಮರೆಯಾಗುತ್ತಿತ್ತು. ಆಕ್ಕನ ಮದುವೆಗೆಂದು ಮನೆಗೆ ಬಂದವನಿಗೆ ಎನೋ ಬದಲಾದಂತೆ ಭಾಸ.ಮದುವೆಯ ಸಂಭ್ರಮ,ಅದಕ್ಕೆಂದೆ ಹಾಕಿದ್ದ ದೊಡ್ಡ ಚಪ್ಪರ,ಇವೆಲ್ಲವುಗಳ ನಡುವೆಯೂ ಎನೋ ಅಸಮಧಾನ.ಆಸ್ರಿ ಕುಡಿದು,ಸುಮ್ಮನೆ ಹಿತ್ತಿಲ ಕಡೆ ಹೋದವನಿಗೆ ಕಂಡಿದ್ದು,ತನ್ನ ರೆಂಬೆ-ಕೊಂಬೆಗಳನ್ನೆಲ್ಲ ಕಳೆದುಕೊಂಡು,ಬೆಸ್ಕಾಮ್ ನ ಕ್ರಪೆಗೆ ಪಾತ್ರವಾದಂತೆ ತೋರುತ್ತಿದ್ದ,ನನ್ನ ಪ್ರೀತಿಯ ಬೆಣ್ಣೆಹಣ್ಣಿನ ಗಿಡ..ಆಲ್ಲಲ್ಲ ಮರ.ಆ ಮದುವೆಯ ಗಲಾಟೆಯಲ್ಲೇ ಅಪ್ಪಯ್ಯನನ್ನು ಕೇಳಿದಾಗ,ಆಪ್ಪಯ್ಯ"ಮತ್ತೆಂತ ಮಾಡಲಾಗ್ತ ಮಾಣಿ?ಇಷ್ಟು ವರ್ಷಾತು,ಒಳ್ಳೇ ರಾಕ್ಷಸನಾಂಗೆ ಬೆಳೆದಿತ್ತು.ಒಂದು ದಿವ್ಸಾ ಹೇಳಿ ನೀರ್ ತಪ್ಸಿದ್ನಿಲ್ಲೆ.ನಿನ್ನ ಅಮ್ಮ ಮಾಡಿದ್ ವಾಗತಿ ಅಂತೂ ನಿಂಗೇ ಗೊತ್ತಿದ್ದು.ಇಷ್ಟೆಲ್ಲ ಮಾಡಿದ್ರೂ, ಒಂದು ನಾಲ್ಕು ಹೂಗ್ ಸಹಿತಾ ಕಚ್ಗತ್ತಿಲ್ಲೆ ಅಂದ್ರೆ,ಚೊಲೊ ಜಾತಿದೇ ಅಲ್ಲಾ ಕಾಣ್ತ ಅದು.ಬೇಜಾರಾಗಿ,ಬೇರೆ ಗಿಡಕ್ಕೂ ಗೊಳಲಾಗ್ತು,ಚಪ್ಪರಾನೂ ಸರಿ ಹಾಕಲಾಗ್ತಿಲ್ಲೆ ಹೇಳಿ ಮೊನ್ನೆ ಮಂಜನ ಕೈಲಿ ಹೇಳಿ ಸವರ್ಸಿ ಹಾಕ್ದೆ ಅಂದ".ಆಪ್ಪಯ್ಯನ ಮಾತುಗಳಲ್ಲಿನ ವಾಸ್ತವತೆಯನ್ನು ಜೀರ್ಣಿಸಿಕೊಳ್ಳುವದು ಕಷ್ಟವೆನಿಸಿತು.

ಮದುವೆಯೂ,ಅದರ ಸಂಭ್ರಮವೂ ಮುಗಿದ ಬೆನ್ನಿನಲ್ಲೇ,ನನಗೂ ಸಹಾ ಯಾವುದೊ ಇಂಟರ್ನಲ್ಲೋ,ಎಕ್ಸಾಮೋ ಕಾಯುತ್ತಿತ್ತು,ಭಾರವಾದ ಮನಸ್ಸಿನೊಂದಿಗೆ,ಹಗುರವಾದ ತೊಡದೇವಿನೊಂದಿಗೆ ಮೆಜೆಸ್ಟಿಕ್ ಗೆ ಬಂದಿಳಿದೆ.ಹೀಗೊಂದು ಭಾನುವಾರ, ಪಕ್ಷಿಪ್ರೇಮಿಯಾದ ನಾನು, ಸಹಭಿರುಚಿಯ ಸ್ನೆಹಿತನೊಂದಿಗೆ ಎಂ.ಜಿ.ರೋಡ್,ಬ್ರಿಗೇಡ್ ನೆಲ್ಲ ಸುತ್ತಿ,ಸಾಯಂಕಾಲದ ಆಹ್ಲಾದಕರ ವಾತಾವರಣವನ್ನು ಸವಿಯುತ್ತ, ಬುಲ್ ಟೆಂಪಲ್ಲಿನ ಹಿಂದಿರುವ ಪಕ್ಶಿಧಾಮದಲ್ಲಿ ವಿಹರಿಸಿ,ರಾಮಾಂಜನೇಯರಿಗೆ ವಂದನೆ ಸಲ್ಲಿಸಿ ರೂಮನ್ನು ತಲುಪಿದಾಗ ಅಜಮಾಸು ಹತ್ತು ಗಂಟೆ.ಆದೆಲ್ಲಿಂದಲೊ ಅಣ್ಣ ಪಾರ್ಸೆಲ್ ತಂದಿದ್ದ ಜ್ಯೂಸನ್ನು ಕುಡಿದವನಿಗೆ ಎನೋ ಆಹ್ಲಾದ,ಎಲ್ಲೋ ಆಘ್ರಾಣಿಸಿದ ಪರಿಮಳ.ಅಣ್ಣನನ್ನು ಅದು ಯಾವ ಜ್ಯೂಸೆಂದು ಕೇಳಿದರೆ ಸಮಂಜಸ ಉತ್ತರ ದೊರಕಲಿಲ್ಲ.ಇದೆಲ್ಲದರ ನಡುವೆ ಇಂಟರ್ನಲ್ಲುಗಳು,ಎಕ್ಸಾಮುಗಳು,ಪ್ರಾಜೆಕ್ಟುಗಳು ನಿಲ್ಲದ ಭೇದಿಯಂತೆ ಒಂದೇ ಸಮನೆ ನನ್ನನ್ನು ಆರನೆ ವರ್ಷಾರ್ಧದ ಅಂತ್ಯಕ್ಕೆ ತಂದು ನಿಲ್ಲಿಸಿದ್ದವು.ಪರೀಕ್ಷೆಗಳೆಲ್ಲವೂ ಮುಗಿದೂ,ಯಾವುದೋ ಒಂದು ಬಹುರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಸಿಗುವ ಭರವಸೆಯೊಂದಿಗೆ,ಸಂಭ್ರಮದಿಂದಲೆ ಊರನ್ನು ಸೇರಿದ್ದೆ.

ಆಪ್ಪಯ್ಯ,ಆಯಿಗೋ ಹೇಳತೀರದ ಸಡಗರ.ಆಯಿಗೆ ಆ ಕಂಪನಿಯ ಹೆಸರನ್ನು ಹೇಳುವಂತೆ ಮಾಡಲು ಇಡೀ ದಿನ ಹೆಣಗಿಬಿಟ್ಟಿದ್ದೆ.ಬೆಳಿಗ್ಗೆ, ದೋಸೆಯನ್ನು ತುಪ್ಪ-ಬೆಲ್ಲದ ಕಾಂಬಿನೇಷನ್ನಿನ ಜೊತೆಗೆ ತಿನ್ನುತ್ತಿದ್ದವನಿಗೆ ಕಾಣಿಸಿದ್ದು ಅದೇ ಬೆಣ್ಣೆಹಣ್ಣಿನ ಮರ."ಅರೆ!!ಎಷ್ಟೆತ್ತರ ಹೋಗಿಬಿಟ್ಟಿದೆ ಇದು?ಆದೂ ಯಾವುದೆ ರೆಂಬೆ-ಕೊಂಬೆ,ಟಿಸಿಲುಗಳಿಲ್ಲದೇ?ಕೇವಲ ಎತ್ತರ ಬೆಳೆಯುವುದೊಂದೇ ತನ್ನ ಧ್ಯೇಯವೋ ಎಂಬಂತೆ.ಈ ಗಿಡಕ್ಕೆ ಮಾತ್ರ ಈ ಪರಿ ಬೆಳೆಯುವ ಹುಚ್ಚು ಹೇಗೆ ಬಂತು?ಆಬ್ಬಬ್ಬಾ ಇದರ ಜಂಭವೆ?"ಎಂದುಕೊಳ್ಳುತ್ತಿರಲು,ಅಪ್ಪಯ್ಯ ಅಂದ"ನೋಡು ಮಾಣಿ,ಆ ಮರವ,ಯಾನಮ್ನಿ ಬೆಳ್ದು ನಿಂತಿದ್ದು ಹೇಳಿ.ಈಗ ಒಂದೂವರೆ-ಎರಡು ವರ್ಷಾಗ್ತಾ ಬಂದೋತು,ನನಗೂ ಎಂತೂ ವಾಗತಿ ಮಾಡಲೆ ಆಗ್ತಾನೂ ಇಲ್ಲೆ.ನೋಡ್ದವೆಲ್ಲಾ ಅದನ್ನೆ ಹೆಳ್ತ,ಅದ್ಯಾನಮ್ನಿ ಬೆಳ್ದು ನಿಂತಿದ್ದು ಆ ಗಿಡ,ಪೇಪರ್ನಲ್ಲಾದ್ರೂ ಕೊಡ್ಲಕ್ಕಾಯಿತ್ತು ಹೇಳಿ.ನಂಗೆ ಅದನ್ನ ಕಡಿಯಲೂ ಮನಸ್ಸು ಬತ್ತಿಲ್ಲೆ,ಎಷ್ಟಂದ್ರೂ ಕೈಯಾರೆ ನೆಟ್ಟಿದ್ದಲ್ದ?ಮೊನ್ನೇ ಎಲ್ಲೊ ಒನ್ದೆರಡು ಕಾಯಿ ಕಚ್ಗಂಡಾಂಗೆ ಕಂಡಿತ್ತಪ,ಅದಿನ್ನು ಹಕ್ಕಿ-ಪಿಕ್ಕಿ ಪಾಲಾಗೆ ಹೋಗವ ಎನ?ಹತ್ತಲೆಲ್ಲ ಆಗ್ತಿಲ್ಯ ಮಾಣಿ,ಭಾರಿ ಸುಟಿ ಈ ಮರ".ಅಪ್ಪಯ್ಯನ ಇಳಿ ಬಿದ್ದ್ಡ ಸುಕ್ಕು ಮುಖದ ಗೆರೆಗಳಲ್ಲಿ,ಎನೋ ಸಂತ್ರಪ್ತಿ ಭಾವ.

ಮರು ಪ್ರಯಾಣದ ಸಿಧ್ಧತೆಯಲ್ಲಿದ್ದಾಗ,ಆಯಿಯದೊಂದೆ ವರಾತ:"ಎಂತದ ಈ ನಮ್ನಿ ಮಾಡ್ತೆ?ಮೊದ್ಲೆಲ್ಲ ಎರ್ಡು ತಿಂಗ್ಳಿಗೊಂದ್ಸಲಾ ಆದ್ರು ಬತ್ತಿದ್ದೆ,ಈಗಂತೂ ಬರದೂ ಆರ-ಎಳ ತಿಂಗ್ಳಿಗೊಂದ್ಸಲಾ,ಅದೂ ಮೂರ-ನಾಲ್ಕ ದಿನಕ್ಕೆ ಗಂಟೂ-ಮೂಟೆ ಕಟ್ಟಿ ಬಿಡ್ತೆ.ಎಂತಾ ಹುಗ್ದಿಟ್ಟಿದ್ದೆ,ಬೆಂಗಳೂರಲ್ಲಿ?".ಅಂತೂ ಆಯಿಯನ್ನು ಸಮಾಧಾನಿಸಿ ಹಿಂತಿರುಗಿ ಬಂದದ್ದಾಯಿತು.

ಮತ್ತೆ ಯಥಾಪ್ರಕಾರ ಏಳನೇ ಸೆಮೆಸ್ಟರಿಗೆ ಪಾದಾರ್ಪಣೆ.ಆವತ್ತೊಂದು ದಿನ ಎಂದಿನಂತೆ ಕಾಲೇಜು ಮುಗಿಸಿ,ಬಿ.ಟಿ.ಸ್ ನಲ್ಲಿ ನನ್ನ ಕಸರತ್ತು ಪ್ರದರ್ಶಿಸುವ ಮೊದಲು ಜ್ಯೂಸ್ ಕುಡಿಯಬೇಕೆಂದೆನಿಸಿ ಅಲ್ಲೆ ಹತ್ತಿರವಿದ್ದ ಅಂಗಡಿ ಹೊಕ್ಕೆ."ರಸಸಾಗರ" ಎನ್ನುವುದು ಅದರ ಹೆಸರಾದರೂ,"ನೊಣಸಾಗರ" ಎಂಬ ಅನ್ವರ್ಥಕ ನಾಮದಿಂದ ಪ್ರಸಿದ್ದಿ ಪಡೆದಿತ್ತು.ಪ್ರಿನ್ಸಿಪಾಲರ ಕಟ್ಟಪ್ಪಣೆಯ ಮೇರೆಗೆ ಕತ್ತಿನಲ್ಲಿ ನೇತಾಡುತ್ತಿದ್ದ ಪಟ್ಟಿಗೆ ಇನ್ನೂ ಬಿಡುಗಡೆ ಸಿಕ್ಕಿರಲಿಲ್ಲ.ದರಪಟ್ಟಿಯ ಮೇಲೆ ಕಣ್ಣು ಹಾಯಿಸುತ್ತಿದ್ದಾಗ, ಮೊದಲ ಗಮನ ಲೈಮ್ ಜ್ಯೂಸಿನ ಮೇಲೆ ಹೋಯಿತಾದರೂ,ತೀರ ಜ್ಯೂಸ್ ಅಂಗಡಿಯಲ್ಲಿ ಕಂಜೂಸ್ ಆಗಬಾರದೆಂದು,ನಿರ್ಲಕ್ಷಿಸಿದೆ.ಹಾಗೇ ಹೊಸದ್ಯಾವ್ದಾದ್ರು ಜ್ಯೂಸ್ ಕುಡಿಯೋಣವೆಂದು ಯೋಚಿಸುತ್ತಿದ್ದವನಿಗೆ ಕಂಡಿದ್ದು "ಬಟರ್ ಫ್ರೂಟ್ ಮಿಲ್ಕ್ ಷೇಕ್". ಅದನ್ನೇ ಕೊಡಪ್ಪಾ ಎಂದು ಅಂಗಡಿಯಾತನಿಗೆ ಹೇಳಿ ರಸ್ತೆ ಕಡೆ ಕಣ್ಣಾಡಿಸುತ್ತಿದ್ದವನ ದೃಷ್ಟಿ,ಅಲ್ಲೇ ಪಕ್ಕದಲ್ಲಿದ್ದ ಹಣ್ಣಿನ ರಾಶಿಯ ಮೇಲೆ ಹೋಯಿತು.ಹಸಿರು,ನಸು ಹಳದಿ ಬಣ್ಣದ ಅದನ್ನು ಹಣ್ಣೋ?ತರಕಾರಿಯೋ? ನಿರ್ಧರಿಸಲಾಗದೆ ಅಂಗಡಿಯಾತನನ್ನು ಕೇಳಿದೆ,ಏನಪ್ಪಾ ಅದು ಅಂತ?"ಅದು ಬಟರ್ ಫ್ರೂಟು ಸಾ..ಅಂಗಂದ್ರೆ "ಬೆಣ್ಣೆಹಣ್ಣೂ" ಅಂತಿದ್ರು ಸಾವ್ಕಾರ್ರು"ಅಂದ.ಆವಾಗಾದ ಆಶ್ಚರ್ಯಕ್ಕೆ,ಸಂಭ್ರಮಕ್ಕೆ ಎಣೆ ಇರಲಿಲ್ಲ.ಕುತೂಹಲ ಅದುಮಿಟ್ಟುಕೊಳ್ಳಲಾಗದೆ ಕೇಳಿದೆ,ಎಲ್ಲಿಂದ ತರಿಸ್ತೀರಿ ನೀವಿದನ್ನ?ಅದಕ್ಕೆ ಅವನೆಂದ,"ನಮ್ಗೇನು ಗೊತ್ತು ಸಾರ್,ಎಲ್ಲಿಂದ ಬತ್ತದೆ ಅಂತ?ಮಾರ್ಕೆಟಿಗೆ ಬತ್ತದೆ ನಾವ್ ತತ್ತೀವಿ.ಈಗ ಒಳ್ಳೇ ಮಾರ್ಕೆಟ್ ಐತೆ ಸಾ..ಇದಕ್ಕೆ,ಸೀಸನ್ ಅಲ್ವಾ?"ನನಗೋ ಪಿಚ್ಚೆನಿಸಿದಂತಾಗಿ ಸುಮ್ಮನಾದೆ.ಆದರೂ ಮತ್ತೊಮ್ಮೆ ದೃಷ್ಟಿ ಅದರ ಮೇಲೆ ಹಚ್ಚಿದ್ದ ಸ್ಟಿಕ್ಕರ್ ಮೇಲೆ ಹೋಯಿತು.ಮತ್ತೆ ಕೇಳಿದೆ,ಸ್ಟಿಕ್ಕರ್ ಯಾಕಯ್ಯಾ ಹಚ್ತೀರಿ?ನನ್ನನ್ನೊಮ್ಮೆ ವಿಚಿತ್ರವಾಗಿ ನೋಡಿದ ಆತ ಹೇಳಿದ,"ಬ್ರಾಂಡ್ ನೇಮು ಸಾ..ಸುಮ್ನೆ ತಂದಿಟ್ಕೊಂಡ್ರೆ ಜನಾ,ಜ್ಯೂಸ್ ಅಂಗಡಿಯೋರು ಒಯ್ತಾರ?ಕ್ವಾಲಿಟಿ ಇಂಪೊರ್ಟೆಂಟು ಸಾ.."ಯಾಕೋ ಗೊತ್ತಿಲ್ಲ,ಸರಕ್ಕನೇ ನನ್ನ ಕೊರಳಪಟ್ಟಿಯನ್ನು ಜೇಬಿಗಿಳಿಸಿಕೊಂಡು ಜ್ಯೂಸನ್ನು ಕೈಗೆತ್ತಿಕೊಳ್ಳಲು ನಡೆದೆ.

ಜ್ಯೂಸ್ ಕುಡಿಯುತ್ತಿದ್ದಂತೆ ಕಣ್ಣ ಮುಂದೆ ಬರೀ ಬೆಣ್ಣೆಹಣ್ಣುಗಳದ್ದೇ ಚಿತ್ರ.ಎಲ್ಲಿ ನೋಡಿದರೂ ಬೆಣ್ಣೆಹಣ್ಣುಗಳು.ಅದೂ ಒಂದೇ ಆಕಾರದ,ಒಂದೇ ರೀತಿಯ,ಹಸಿರು,ನಸು ಹಳದೀ ಬಣ್ಣದ ಹಣ್ಣುಗಳು.ಎಲ್ಲ ಬೆಣ್ಣೆಹಣ್ಣುಗಳ ಮೇಲೂ ಕೆಂಪು,ನೀಲಿ,ಗುಲಾಬಿ ಬಣ್ಣದ ಸ್ಟಿಕ್ಕರ್ ಗಳು.ಕಾಲೇಜಿನ ಎಂಟ್ರನ್ಸಿನಿಂದ ಉರುಳಿ,ಉರುಳಿ ಬರುತ್ತಿರುವ ಹಣ್ಣುಗಳು.ಬಸ್ ಸ್ಟಾಪಿನಲ್ಲೂ ಅವುಗಳದೆ ಸಾಮ್ರಾಜ್ಯ.ಅರೇ,ಇದೇನಿದು?ರಸ್ತೆಯಲ್ಲಿ ಹೋಗುತ್ತಿರುವ ಪ್ರತಿ ಕಾರಿನಲ್ಲೂ,ಬೈಕಿನ ಮೇಲೂ,ಬಸ್ಸಿನ ತುಂಬೆಲ್ಲ ಬೆಣ್ಣೆಹಣ್ಣುಗಳೆ.ಸ್ಟಿಕ್ಕರ್ ಗಳ ಬಣ್ಣ ಮಾತ್ರ ಬೇರೆ.ನಾನು ಕುಡಿಯುತ್ತಿರುವ ಬೆಣ್ಣೆಹಣ್ಣಿನ ಜ್ಯೂಸು ಎಷ್ಟು ಕುಡಿದರೂ ಖಾಲಿಯಾಗುತ್ತಿಲ್ಲ.ಕುಡಿಯಲಾಗದೆ ಹಾಗೆ ಉಳಿಸಿದ ಜ್ಯೂಸಿನ ಗ್ಲಾಸನ್ನು ಪಕ್ಕದಲ್ಲಿರಿಸಿ,ಅಂಗಡಿಯಾತನಿಗೆ ಹಣ ಕೊಡಲು ಬಂದರೆ ಅಲ್ಲಿ ಮತ್ತೊಂದು ಆಶ್ಚರ್ಯ ಕಾದಿತ್ತು.ಆತನ ಆಂಗಡಿಯಲ್ಲಿ ಬೆಣ್ಣೆಹಣ್ಣನ್ನು ಹೊರತುಪಡಿಸಿ ಉಳಿದ ಹಣ್ಣುಗಳೊಂದೂ ಕಾಣಿಸುತ್ತಿಲ್ಲ.ಅಂಗಡಿಗೆ ಬಂದವರೆಲ್ಲರೂ ಕೇಳುತ್ತಿರುವದು ಬೆಣ್ಣೆಹಣ್ಣಿನ ಜ್ಯೂಸನ್ನೊಂದೇ.ಆತನ ಅಂಗಡಿಯಲ್ಲಿ,ಬೇರೆ ಯಾವ ಹಣ್ಣಿನ ಜ್ಯೂಸಿಗೂ ಅಸ್ತಿತ್ವವೇ ಇಲ್ಲದಾಗಿದೆ.ಇಷ್ಟು ಶೀಘ್ರವಾಗಿ,ಒಂದೇ ಅಭಿರುಚಿಯಿರುವ ಇಷ್ಟೊಂದು ಜನರ ಜಾತ್ರೆಯನ್ನು ಕಂಡು ನಾನು ಕಂಗಾಲಾಗಿ ಹೋದೆನು."ಒಳ್ಳೇ ಮಾರ್ಕೆಟೈತೆ ಸಾರ್,ಸೀಸನ್ ಟೈಮು,ಬಿಸಿನೆಸ್ಸೂ ಚೆನ್ನಾಗೈತೆ" ಎಂದ ಅಂಗಡಿಯಾತನ ಮಾತೇ ಪದೇ,ಪದೇ ಪ್ರತಿದ್ವನಿಸಿದಂತಾಗಿ,ಬವಳಿ ಬಂದಂತಾಗಿ ಅಲ್ಲೇ ಇದ್ದ ಸಿಮೆಂಟ್ ಕಟ್ಟೆಯ ಮೇಲೆ ಕುಸಿದು ಕುಳಿತೆ.

Saturday, October 13, 2007

ರೂಪಾಂತರ

ಮೊನ್ನೆ ಎಕೋ ಮಾಸಪತ್ರಿಕೆ-ವಾರಪತ್ರಿಕೆಗಳ ನಡುವೆ ಮುಳುಗಿಹೋಗಿದ್ದವನಿಗೆ,ಒಂದು "ಸಂಶೋಧನಾತ್ಮಕ ವರದಿ" ಕಾಣಿಸಿತು.ಮೊದಲು ನನ್ನನ್ನು ಆಕರ್ಷಿಸಿದ್ದೇ ಅದರ ಶೀರ್ಷಿಕೆ:"ನಗರದಿಂದ ಕಣ್ಮರೆಯಾಗುತ್ತಿರುವ ಗುಬ್ಬಿಗಳು!"ಲೇಖಕ ಅಂಕಿ-ಅಂಶಗಳ ಆಧಾರ ಸಹಿತ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದ.ನನಗೆ ಒಮ್ಮೆಲೆ ಆಶ್ಚರ್ಯವೂ,ಚಿಕ್ಕ ಅಸಮಧಾನವೂ ಉಂಟಾಯಿತು.ಅರೇ,ಇದೇನಿದು?ಏನಾಗಿದೆ ಇವರಿಗೆಲ್ಲ?ಇವರಿಂದ ಲಕ್ಷಾಂತರಗುಬ್ಬಿಗಳನ್ನುಗುರುತಿಸಲಾಗುತ್ತಿಲ್ಲವಲ್ಲ?ವರ್ಷದಿಂದ ವರ್ಷಕ್ಕೆ ನಗರಕ್ಕೆ ವಲಸೆ ಬರುತ್ತಿರುವ,ಇಲ್ಲೇ ಬೀಡು ಬಿಡುತ್ತಿರುವ ಗುಬ್ಬಿಗಳು ಇವರ ಗಮನಕ್ಕೇ ಬಂದಿಲ್ಲವಲ್ಲ?ವಿವಿಧ ಭಾಷೆ,ಸಂಸ್ಕ್ರತಿ,ಸಂಪ್ರದಾಯಗಳನ್ನು ಹೊತ್ತು ತರುತ್ತಿರುವ ರಾಯಭಾರಿಗಳ ಬಗ್ಗೆ ಇಷ್ಟು ನಿರ್ಲಕ್ಷ್ಯವೇ?

ಇದೇನು ಹೇಳುತ್ತಿದ್ದಾನಿವನು ಎಂದು ಗೊಂದಲಕ್ಕೊಳಗಾಗದಿರಿ.ಒಮ್ಮೆ ಯೋಚಿಸಿ ನೋಡಿ.
ನಗರವಾಸಿಗಳಾದ ನಾವೆಲ್ಲರೂ ಗುಬ್ಬಿಗಳಂತೆಯೇ ಅಲ್ಲವೇ?ಕೇವಲ ಕಾಳು-ಕಡ್ಡಿ ಸಂಗ್ರಹಿಸುವ,ಕಾದಿಟ್ಟುಕೊಳ್ಳುವ ಹುಚ್ಚಿನಿಂದ ನಾವು ನಮ್ಮಾಸೆಗಳನ್ನೂ,ಜೀವನದ ಉದ್ದೇಶಗಳನ್ನೂ ಸೀಮಿತಗೊಳಿಸಿಕೊಂಡಿಲ್ಲವೆ?ನಮ್ಮ ಬದುಕನ್ನು ಯಾಂತ್ರಿಕಗೊಳಿಸಿಕೊಂಡಿಲ್ಲವೇ?ನವಿಲಿನಂತೆ ನಾವು ಮನಬಿಚ್ಚಿ ನರ್ತಿಸಲಾರೆವು,ಹದ್ದಿನಂತೆ ಆಕಾಶದೆತ್ತರಕ್ಕೇರುವ ಹುಚ್ಚು ಕನಸನ್ನು ಕಾಣೆವು,ಕೋಗಿಲೆಯಂತೆ ಇಂಪಾದ ದನಿಯಲ್ಲಿ ನಮ್ಮ ಭಾವನೆಗಳನ್ನು,ಒಡಲ ಹಾಡುಗಳನ್ನು ವ್ಯಕ್ತಪಡಿಸಲಾರೆವು.
ಎಲ್ಲರಿಗೂ ಏನೋ ಧಾವಂತ,ಪ್ರಷ್ಠ ಸುಟ್ಟ ಬೆಕ್ಕಿನ ಹಾಗೆ.

ನಮ್ಮ ಪ್ರಪಂಚವೂ ಅಷ್ಟೆ; ಡಿನಗಳೆದಂತೆ ಚಿಕ್ಕದಾಗುತ್ತಲೇ ಹೋಗುತ್ತಿದೆ.ನಾನು,ಹೆಂಡತಿ,ನಮ್ಮ ಮಗು:ಇಷ್ಟು ಮಾತ್ರಕ್ಕೆ ಸೀಮಿತವಾಗುತ್ತಿದೆ ಕಟ್ಟಿಕೊಳ್ಳುತ್ತಿರುವ ಬದುಕು.ನಮ್ಮ ಮನೆಗಳೆಲ್ಲ ಗುಬ್ಬಿಗೂಡುಗಳಾಗುತ್ತಿವೆ.ಅನ್ಯಾಯ,ಭ್ರಷ್ಟಾಚಾರಗಳ ವಿರುದ್ಧ ಸ್ಪಷ್ಟ ದನಿಯೆತ್ತುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ,ಕಾರ ಣ ನಮ್ಮದು ಗುಬ್ಬಿದನಿ.ದಯೆ,ಮಾನವೀಯತೆ,ಉಪಕಾರ ಭಾವಗಳನ್ನೆಲ್ಲ ನಾವು ನಮ್ಮದಾಗಿಸಿಕೊಳ್ಳಲು ಸಿದ್ಧರಿಲ್ಲ,ನಮ್ಮವು ದುರ್ಬಲ ರೆಕ್ಕೆಗಳು.ಮನೆಯ ಮಾಡಿನ ಸಂದು-ಗೊಂದುಗಳಲ್ಲೊಂದಿಷ್ಟು ಜಾಗ ಸಿಕ್ಕಿದರೂ ಸಾಕು,ಥೇಟ್ ಗುಬ್ಬಿಗಳಂತೆ ನಾವೂ ಗೂಡು ಕಟ್ಟಿಕೊಂಡುಬಿಡುತ್ತೇವೆ.ನಾವೆಂದೂ ಹುಚ್ಚು ಕನಸುಗಳನ್ನು ಕಾಣಲಾರೆವು,ಭಾವುಕ ಪ್ರಪಂಚದಲ್ಲಿ ವಿಹರಿಸಲಾರೆವು,ಏಕೆಂದರೆ ನಮ್ಮ ಹಾರಾಟದ ಮಿತಿ ನಮಗೆ ಗೊತ್ತು.
ಯಾವ ಅಪಾಯವೋ,ಯಾವುದೋ ವಿಷಘಳಿಗೆಯೋ ನಮಗಾಗಿಯೇ ಕಾದಿದೆ ಎಂಬ ಅಸ್ಪಷ್ಟ ತಳಮಳ ನಮ್ಮಲ್ಲಿ ಥೇಟ್ ಗುಬ್ಬಿಸಂಕಟದಂತೆ ನಿರಂತರ.

ನಮ್ಮ ಕೆಲಸಗಳ,ಧಾವಂತಗಳ,ಅವಸರಗಳ ನಡುವೆ ನಾವೇ ಅನಾಮಿಕರಾಗಿ ಹೋಗುತ್ತಿದ್ದೇವೆ.ನಮ್ಮ ಇರುವು ಯಾರಿಗೂ ಅಂತಹ ಆಸಕ್ತಿಗೂ,ಕುತೂಹಲಕ್ಕೊ ಎಣೆಯಾಗುತ್ತಿಲ್ಲ:ಥೇಟ್ ಗುಬ್ಬಿಗಳಂತೆ.ನಮ್ಮ ಇರುವೇ ಹಾಗೆ:ನಮಗೇನಾದರೂ ಚಿಕ್ಕ ಅಪಾಯದ ಸೂಚನೆ ಕಂಡಿತೋ ತಕ್ಷಣ ಅಲ್ಲಿಂದ ಪಲಾಯನಗೈದುಬಿಡುತ್ತೇವೆ.ದೂರದಲ್ಲಿನ ಧಾನ್ಯ-ಸಂಗ್ರಹ ನಮ್ಮ ಕಣ್ಣನ್ನು ಯಾವತ್ತೂ ಕುಕ್ಕುತ್ತದೆ.ಪುರ್ರನೆ ಹಾರಿಬಿಡುತ್ತೇವೆ.ಧಾನ್ಯ ಜೊಳ್ಳೇ,ಗಟ್ಟಿಯೋ ಅದು ನಂತರದ ಮಾತು.ನಮಗೆ ನಮ್ಮಸಂಸ್ಕ್ರತಿ,ಸಂಪ್ರದಾಯಗಳ ಬಗ್ಗೆ ಅಂತಹ ಕಾಳಜಿಯಾಗಲಿ,ಹೆಮ್ಮೆಯಾಗಲಿ ಉಳಿದಿಲ್ಲ.ಎಲ್ಲವನ್ನೂ ಗಾಳಿಗೆ ತೂರಿ ಬಿಡಲು ಸದಾ ಸನ್ನದ್ಧರಾಗಿದ್ದೇವೆ.ಬಲಿಷ್ಟ ಪಕ್ಷಿಗಳ ಜೊತೆಗೆ ನಮ್ಮ ಅಸ್ಥಿತ್ವಕ್ಕಾಗಿ ಹೋರಾಡುವ ಶಕ್ತಿಯೂ ನಮ್ಮಲ್ಲಿಲ್ಲ,ಎಷ್ಟೆಂದರೂ ನಾವು ಗುಬ್ಬಿಗಳು.ನಮ್ಮ ಕಾಳು-ಕಡ್ಡಿ ಬೇರೆಯವರ ಪಾಲಾದರೂ,ನಮಗದು ರೋಷವನ್ನು ತರುವುದಿಲ್ಲ,ಬದಲಿಗೆ ಗುಟುಕು ನೀರಿನಿಂದಲೆ ಜೀವ ಹಿಡಿದಿಟ್ಟುಕೊಳ್ಳಬಲ್ಲ ಕಷ್ಟಸಹಿಷ್ಣುಗಳು ನಾವು.ಯಾರಿಗೆ ಅನ್ಯಾಯವಾದರೂ,ಯಾರ ಅಸಹಾಯಕ ಕೂಗು ಕೇಳಿದರೂ,ಒಕ್ಕೊರಲ ಪ್ರತಿಭಟನೆ ನಮ್ಮಿಂದ ಅಸಾಧ್ಯ,ಹೇಳಿ-ಕೇಳಿ ನಾವು ಗುಬ್ಬಿಗಳು.

ಈಗ ಹೇಳಿ,ಎಲ್ಲಿ ಕಣ್ಮರೆಯಾಗಿವೆ ಗುಬ್ಬಿಗಳು?ಏಲ್ಲೆಲ್ಲಿಂದಲೋ ಬಂದ ಗಿಳಿ-ಗೊರವಂಕಗಳು,ಹೊನ್ನ ಮೈಬಣ್ಣದ ಮೈನಾಗಳು,ಒನಪು-ವೈಯಾರದ ಮೀಂಚುಳ್ಳಿಗಳು,ಕೋಗಿಲೆಗಳು,ಅಚ್ಚ ಬಿಳುಪಿನ ಹಂಸಗಳು,ಬಾತುಗಳು,ಕೊಂಕು ಕತ್ತಿನ ಕೊಕ್ಕರೆಗಳು ಎಲ್ಲವೂ ನಗರಕ್ಕೆ ಬಂದು ಗುಬ್ಬಿಗಳಾಗಿವೆ.ತಮ್ಮ ಮೂಲ ರೂಪ,ಗುಣ,ಸ್ವಭಾವಗಳನ್ನೇ ಮರೆತು ಕಾಳು ಹೆಕ್ಕುತ್ತಿವೆ.ಇದ್ದ ಗುಬ್ಬಿಗಳೆಲ್ಲಾ ನಗರ ಜೀವನದಿಂದ ಬೇಸತ್ತು ಕಿನ್ನರ ಲೋಕಕ್ಕೆ ಹೋಗಿರುವುದು ನಿಜವಾದರೂ,ನಮ್ಮಲ್ಲಿ ಗುಬ್ಬಿಗಳಿಗೆ ಬರವಿಲ್ಲ.ಮನುಷ್ಯರು ಗುಬ್ಬಿಗಳಾಗುತ್ತಿರುವುದನ್ನು ನೋಡಿ,ಈ ರೂಪಾಂತರವನ್ನು ಅರಗಿಸಿಕೊಳ್ಳಲಾಗದೇ ಸುಮ್ಮನೆ ಕಳವಳಗೊಳ್ಳುವುದರಲ್ಲಿ ಯಾವ ಅರ್ಥವಿದೆ ನೀವೆ ಹೇಳಿ?