Saturday, October 13, 2007

ರೂಪಾಂತರ

ಮೊನ್ನೆ ಎಕೋ ಮಾಸಪತ್ರಿಕೆ-ವಾರಪತ್ರಿಕೆಗಳ ನಡುವೆ ಮುಳುಗಿಹೋಗಿದ್ದವನಿಗೆ,ಒಂದು "ಸಂಶೋಧನಾತ್ಮಕ ವರದಿ" ಕಾಣಿಸಿತು.ಮೊದಲು ನನ್ನನ್ನು ಆಕರ್ಷಿಸಿದ್ದೇ ಅದರ ಶೀರ್ಷಿಕೆ:"ನಗರದಿಂದ ಕಣ್ಮರೆಯಾಗುತ್ತಿರುವ ಗುಬ್ಬಿಗಳು!"ಲೇಖಕ ಅಂಕಿ-ಅಂಶಗಳ ಆಧಾರ ಸಹಿತ ತನ್ನ ಕಳವಳವನ್ನು ವ್ಯಕ್ತಪಡಿಸಿದ್ದ.ನನಗೆ ಒಮ್ಮೆಲೆ ಆಶ್ಚರ್ಯವೂ,ಚಿಕ್ಕ ಅಸಮಧಾನವೂ ಉಂಟಾಯಿತು.ಅರೇ,ಇದೇನಿದು?ಏನಾಗಿದೆ ಇವರಿಗೆಲ್ಲ?ಇವರಿಂದ ಲಕ್ಷಾಂತರಗುಬ್ಬಿಗಳನ್ನುಗುರುತಿಸಲಾಗುತ್ತಿಲ್ಲವಲ್ಲ?ವರ್ಷದಿಂದ ವರ್ಷಕ್ಕೆ ನಗರಕ್ಕೆ ವಲಸೆ ಬರುತ್ತಿರುವ,ಇಲ್ಲೇ ಬೀಡು ಬಿಡುತ್ತಿರುವ ಗುಬ್ಬಿಗಳು ಇವರ ಗಮನಕ್ಕೇ ಬಂದಿಲ್ಲವಲ್ಲ?ವಿವಿಧ ಭಾಷೆ,ಸಂಸ್ಕ್ರತಿ,ಸಂಪ್ರದಾಯಗಳನ್ನು ಹೊತ್ತು ತರುತ್ತಿರುವ ರಾಯಭಾರಿಗಳ ಬಗ್ಗೆ ಇಷ್ಟು ನಿರ್ಲಕ್ಷ್ಯವೇ?

ಇದೇನು ಹೇಳುತ್ತಿದ್ದಾನಿವನು ಎಂದು ಗೊಂದಲಕ್ಕೊಳಗಾಗದಿರಿ.ಒಮ್ಮೆ ಯೋಚಿಸಿ ನೋಡಿ.
ನಗರವಾಸಿಗಳಾದ ನಾವೆಲ್ಲರೂ ಗುಬ್ಬಿಗಳಂತೆಯೇ ಅಲ್ಲವೇ?ಕೇವಲ ಕಾಳು-ಕಡ್ಡಿ ಸಂಗ್ರಹಿಸುವ,ಕಾದಿಟ್ಟುಕೊಳ್ಳುವ ಹುಚ್ಚಿನಿಂದ ನಾವು ನಮ್ಮಾಸೆಗಳನ್ನೂ,ಜೀವನದ ಉದ್ದೇಶಗಳನ್ನೂ ಸೀಮಿತಗೊಳಿಸಿಕೊಂಡಿಲ್ಲವೆ?ನಮ್ಮ ಬದುಕನ್ನು ಯಾಂತ್ರಿಕಗೊಳಿಸಿಕೊಂಡಿಲ್ಲವೇ?ನವಿಲಿನಂತೆ ನಾವು ಮನಬಿಚ್ಚಿ ನರ್ತಿಸಲಾರೆವು,ಹದ್ದಿನಂತೆ ಆಕಾಶದೆತ್ತರಕ್ಕೇರುವ ಹುಚ್ಚು ಕನಸನ್ನು ಕಾಣೆವು,ಕೋಗಿಲೆಯಂತೆ ಇಂಪಾದ ದನಿಯಲ್ಲಿ ನಮ್ಮ ಭಾವನೆಗಳನ್ನು,ಒಡಲ ಹಾಡುಗಳನ್ನು ವ್ಯಕ್ತಪಡಿಸಲಾರೆವು.
ಎಲ್ಲರಿಗೂ ಏನೋ ಧಾವಂತ,ಪ್ರಷ್ಠ ಸುಟ್ಟ ಬೆಕ್ಕಿನ ಹಾಗೆ.

ನಮ್ಮ ಪ್ರಪಂಚವೂ ಅಷ್ಟೆ; ಡಿನಗಳೆದಂತೆ ಚಿಕ್ಕದಾಗುತ್ತಲೇ ಹೋಗುತ್ತಿದೆ.ನಾನು,ಹೆಂಡತಿ,ನಮ್ಮ ಮಗು:ಇಷ್ಟು ಮಾತ್ರಕ್ಕೆ ಸೀಮಿತವಾಗುತ್ತಿದೆ ಕಟ್ಟಿಕೊಳ್ಳುತ್ತಿರುವ ಬದುಕು.ನಮ್ಮ ಮನೆಗಳೆಲ್ಲ ಗುಬ್ಬಿಗೂಡುಗಳಾಗುತ್ತಿವೆ.ಅನ್ಯಾಯ,ಭ್ರಷ್ಟಾಚಾರಗಳ ವಿರುದ್ಧ ಸ್ಪಷ್ಟ ದನಿಯೆತ್ತುವುದು ನಮ್ಮಿಂದ ಸಾಧ್ಯವಾಗುತ್ತಿಲ್ಲ,ಕಾರ ಣ ನಮ್ಮದು ಗುಬ್ಬಿದನಿ.ದಯೆ,ಮಾನವೀಯತೆ,ಉಪಕಾರ ಭಾವಗಳನ್ನೆಲ್ಲ ನಾವು ನಮ್ಮದಾಗಿಸಿಕೊಳ್ಳಲು ಸಿದ್ಧರಿಲ್ಲ,ನಮ್ಮವು ದುರ್ಬಲ ರೆಕ್ಕೆಗಳು.ಮನೆಯ ಮಾಡಿನ ಸಂದು-ಗೊಂದುಗಳಲ್ಲೊಂದಿಷ್ಟು ಜಾಗ ಸಿಕ್ಕಿದರೂ ಸಾಕು,ಥೇಟ್ ಗುಬ್ಬಿಗಳಂತೆ ನಾವೂ ಗೂಡು ಕಟ್ಟಿಕೊಂಡುಬಿಡುತ್ತೇವೆ.ನಾವೆಂದೂ ಹುಚ್ಚು ಕನಸುಗಳನ್ನು ಕಾಣಲಾರೆವು,ಭಾವುಕ ಪ್ರಪಂಚದಲ್ಲಿ ವಿಹರಿಸಲಾರೆವು,ಏಕೆಂದರೆ ನಮ್ಮ ಹಾರಾಟದ ಮಿತಿ ನಮಗೆ ಗೊತ್ತು.
ಯಾವ ಅಪಾಯವೋ,ಯಾವುದೋ ವಿಷಘಳಿಗೆಯೋ ನಮಗಾಗಿಯೇ ಕಾದಿದೆ ಎಂಬ ಅಸ್ಪಷ್ಟ ತಳಮಳ ನಮ್ಮಲ್ಲಿ ಥೇಟ್ ಗುಬ್ಬಿಸಂಕಟದಂತೆ ನಿರಂತರ.

ನಮ್ಮ ಕೆಲಸಗಳ,ಧಾವಂತಗಳ,ಅವಸರಗಳ ನಡುವೆ ನಾವೇ ಅನಾಮಿಕರಾಗಿ ಹೋಗುತ್ತಿದ್ದೇವೆ.ನಮ್ಮ ಇರುವು ಯಾರಿಗೂ ಅಂತಹ ಆಸಕ್ತಿಗೂ,ಕುತೂಹಲಕ್ಕೊ ಎಣೆಯಾಗುತ್ತಿಲ್ಲ:ಥೇಟ್ ಗುಬ್ಬಿಗಳಂತೆ.ನಮ್ಮ ಇರುವೇ ಹಾಗೆ:ನಮಗೇನಾದರೂ ಚಿಕ್ಕ ಅಪಾಯದ ಸೂಚನೆ ಕಂಡಿತೋ ತಕ್ಷಣ ಅಲ್ಲಿಂದ ಪಲಾಯನಗೈದುಬಿಡುತ್ತೇವೆ.ದೂರದಲ್ಲಿನ ಧಾನ್ಯ-ಸಂಗ್ರಹ ನಮ್ಮ ಕಣ್ಣನ್ನು ಯಾವತ್ತೂ ಕುಕ್ಕುತ್ತದೆ.ಪುರ್ರನೆ ಹಾರಿಬಿಡುತ್ತೇವೆ.ಧಾನ್ಯ ಜೊಳ್ಳೇ,ಗಟ್ಟಿಯೋ ಅದು ನಂತರದ ಮಾತು.ನಮಗೆ ನಮ್ಮಸಂಸ್ಕ್ರತಿ,ಸಂಪ್ರದಾಯಗಳ ಬಗ್ಗೆ ಅಂತಹ ಕಾಳಜಿಯಾಗಲಿ,ಹೆಮ್ಮೆಯಾಗಲಿ ಉಳಿದಿಲ್ಲ.ಎಲ್ಲವನ್ನೂ ಗಾಳಿಗೆ ತೂರಿ ಬಿಡಲು ಸದಾ ಸನ್ನದ್ಧರಾಗಿದ್ದೇವೆ.ಬಲಿಷ್ಟ ಪಕ್ಷಿಗಳ ಜೊತೆಗೆ ನಮ್ಮ ಅಸ್ಥಿತ್ವಕ್ಕಾಗಿ ಹೋರಾಡುವ ಶಕ್ತಿಯೂ ನಮ್ಮಲ್ಲಿಲ್ಲ,ಎಷ್ಟೆಂದರೂ ನಾವು ಗುಬ್ಬಿಗಳು.ನಮ್ಮ ಕಾಳು-ಕಡ್ಡಿ ಬೇರೆಯವರ ಪಾಲಾದರೂ,ನಮಗದು ರೋಷವನ್ನು ತರುವುದಿಲ್ಲ,ಬದಲಿಗೆ ಗುಟುಕು ನೀರಿನಿಂದಲೆ ಜೀವ ಹಿಡಿದಿಟ್ಟುಕೊಳ್ಳಬಲ್ಲ ಕಷ್ಟಸಹಿಷ್ಣುಗಳು ನಾವು.ಯಾರಿಗೆ ಅನ್ಯಾಯವಾದರೂ,ಯಾರ ಅಸಹಾಯಕ ಕೂಗು ಕೇಳಿದರೂ,ಒಕ್ಕೊರಲ ಪ್ರತಿಭಟನೆ ನಮ್ಮಿಂದ ಅಸಾಧ್ಯ,ಹೇಳಿ-ಕೇಳಿ ನಾವು ಗುಬ್ಬಿಗಳು.

ಈಗ ಹೇಳಿ,ಎಲ್ಲಿ ಕಣ್ಮರೆಯಾಗಿವೆ ಗುಬ್ಬಿಗಳು?ಏಲ್ಲೆಲ್ಲಿಂದಲೋ ಬಂದ ಗಿಳಿ-ಗೊರವಂಕಗಳು,ಹೊನ್ನ ಮೈಬಣ್ಣದ ಮೈನಾಗಳು,ಒನಪು-ವೈಯಾರದ ಮೀಂಚುಳ್ಳಿಗಳು,ಕೋಗಿಲೆಗಳು,ಅಚ್ಚ ಬಿಳುಪಿನ ಹಂಸಗಳು,ಬಾತುಗಳು,ಕೊಂಕು ಕತ್ತಿನ ಕೊಕ್ಕರೆಗಳು ಎಲ್ಲವೂ ನಗರಕ್ಕೆ ಬಂದು ಗುಬ್ಬಿಗಳಾಗಿವೆ.ತಮ್ಮ ಮೂಲ ರೂಪ,ಗುಣ,ಸ್ವಭಾವಗಳನ್ನೇ ಮರೆತು ಕಾಳು ಹೆಕ್ಕುತ್ತಿವೆ.ಇದ್ದ ಗುಬ್ಬಿಗಳೆಲ್ಲಾ ನಗರ ಜೀವನದಿಂದ ಬೇಸತ್ತು ಕಿನ್ನರ ಲೋಕಕ್ಕೆ ಹೋಗಿರುವುದು ನಿಜವಾದರೂ,ನಮ್ಮಲ್ಲಿ ಗುಬ್ಬಿಗಳಿಗೆ ಬರವಿಲ್ಲ.ಮನುಷ್ಯರು ಗುಬ್ಬಿಗಳಾಗುತ್ತಿರುವುದನ್ನು ನೋಡಿ,ಈ ರೂಪಾಂತರವನ್ನು ಅರಗಿಸಿಕೊಳ್ಳಲಾಗದೇ ಸುಮ್ಮನೆ ಕಳವಳಗೊಳ್ಳುವುದರಲ್ಲಿ ಯಾವ ಅರ್ಥವಿದೆ ನೀವೆ ಹೇಳಿ?