Saturday, September 12, 2009

ಶ್ರದ್ಧಾಂಜಲಿ


ಅಂದು ಮನೆಯೊಳಗೆ ಕಾಲಿಟ್ಟಾಗ ಅಡರಿದ್ದು ಶುದ್ಧ ಸಾವಿನ ವಾಸನೆ.ಸಂಜೆ ಏಳರ ಸಮಯ,ದೀಪವಾರುವ ಹೊತ್ತಾ?

ಹತ್ತಿರ ಹೋದಾಗ ಕಂಡಿದ್ದು ಸಂತ್ರಪ್ತ ಕಂಗಳು.ಮಾಡದೇ ಉಳಿದ ಕೆಲಸ ನೆನಪಾಗಿರಬೇಕು,ನನ್ನ ಕಾಣುತ್ತಿದ್ದಂತೆ "ಸದೂಂಗೆ ಒಲೆಗೆ ಮಣ್ಣು ಹಾಕಲೆ ಹೇಳೊ..ತಮಾ" ಎಂದು ಕನವರಿಸತೊಡಗಿದಳು.ಜೊತೆಗೇ ಗಂಟಲಾಳದಿಂದ ಹೊರಬರುತ್ತಿದ್ದ ವಿಚಿತ್ರ ಗೊರ ಗೊರ ಸದ್ದು.ಕರೆಂಟ್ ಬೇಲಿ ಷಾಕಿನಿಂದ ಪರಲೋಕವಾಸಿಯಾಗಿ,ಬೇಲಿಗೆದುರಾಗಿ ಉಚ್ಚೆ ಹೊಯ್ಯುವಾಗಲೆಲ್ಲ ನೆನಪಾಗುತ್ತಿದ್ದ ನನ್ನ ಪ್ರೀತಿಯ ಕಾಕ ಸತ್ತು ಅವತ್ತಿಗಾಗಲೇ ಇಪ್ಪತ್ತು ವರುಷಗಳ ಮೇಲಾಗಿತ್ತು.ನನಗೆ ತುಂಬ ಹೆದರಿಕೆಯಾಗಿ ಕೂಡಲೇ ಅಪ್ಪಯ್ಯನನ್ನು ಕೂಗಿ ಕರೆದಿದ್ದೆ.

ಆ ದಿನ ಒಂದು ಸುಂದರ ಸಾವನ್ನು ತುಂಬ ಹತ್ತಿರದಿಂದ ನೋಡಿದ್ದೆ.ಸಾವೂ..ಸುಂದರವೇ?ಇವನಿಗೆಲ್ಲೋ.ಅರಳು-ಮರಳೆಂದು ನಿಮಗನಿಸಬಹುದು.ಆಕೆಯ ತುಂಬು ಜೀವನ ಪ್ರೀತಿ,ಆಕೆ ಸಾವನ್ನೆದುರುಗೊಂಡ ರೀತಿ..ಇವೆರಡನ್ನೂ ನೋಡಿದ ನನಗೆ ಇದು ಅತಿಶಯೋಕ್ತಿ ಎನಿಸುವದಿಲ್ಲ.ಕತ್ತು ವಾಲಿದ ಮೊಗದಲ್ಲಿ ಪ್ರಸನ್ನತೆಯ ನತ್ತು.ಅಕೆಯ ಅಪ್ಪುಗೆಗೆ ಸಿಲುಕಿದ ಸಾವಂತ ಸಾವಿಗೂ..ಆ ಕ್ಷಣ ಬದುಕಬೇಕು ಎನ್ನಿಸಿರಬೇಕು.ಬದುಕಿನ ಸಿದ್ಧತೆ,ಅದು ಅನಿವಾರ್ಯತೆ..ಸಾವೋ ಸಮಾನತೆಯ ಪ್ರತೀಕ.ಸಾವು ಕದತಟ್ಟುತ್ತಿದ್ದಾಗ,"ನಾಳೆ ಬಾ" ಬರಹಕ್ಕೆಲ್ಲಿದೆ ಅರ್ಥ ?

ಆಕೆ ಬದುಕಿದ್ದೇ ಹಾಗೆ,ಬದುಕಿನಂತೆ.ಆಕೆ ಸಾವನ್ನೆದುರುಗೊಂಡ ರೀತಿ,ಅಕೆಯ ಬದುಕಿಗೆ ಹಿಡಿದ ಕನ್ನಡಿ.ಜೀವನದುದ್ದಕ್ಕೂ ಅನುಭವಿಸಿದ ಬವಣೆ,ಅವಮಾನ,ಬಡತನ ಇವೆಲ್ಲವುಗಳ ಹೊರತಾಗಿಯೂ ಬದುಕಿನ ಬಗ್ಗೆ ಆಕೆಯದು ಒಮ್ಮುಖ ಪ್ರೀತಿ.ಸಾವೆಂಬ ಒಲ್ಲದ ಗಂಡ ಕೈ ಹಿಡಿದಾಗಲೂ ಅಕೆಯ ಕಣ್ಣಲ್ಲಿದ್ದುದು ಅದೇ ಬದುಕಿನ ಆರಾಧನೆ.ಆಕೆ ನನ್ನನ್ನು ವಿಸ್ಮಿತಗೊಳಿಸುವದು ಸಹಾ ಅದೇ ಜೀವನ ಪ್ರೀತಿ ಹಾಗು ಸಾವಿನೆಡೆಗಿನ ದಿವ್ಯ ನಿರ್ಲಕ್ಷ್ಯದಿಂದ.

ಆಕೆಯ ನೆನಪು ಕಾಡುತ್ತಲೇ ಇರುತ್ತದೆ ಬದುಕಿರುವವರೆಗೂ.ಕಣ್ಣಂಚು ತನಗರಿವಿಲ್ಲದೆ ತೇವಗೊಳ್ಳುತ್ತದೆ.ಕಾಡುತ್ತವೆ ಆಕೆಯ ತಿಳಿ ಹಸಿರು ಸೀರೆ,ಅದರ ಮೇಲಿನ ಚಿಕ್ಕ ಕಪ್ಪು-ಹಳದಿ ಚುಕ್ಕೆಗಳು,ಆಕೆಯ ಮಡಿಲು,ಮುಖದ ಸುಕ್ಕು,ಕೈಯ ಹಸಿರು ನರ,ಚಿನ್ನದ ಲೇಪದ ಗುಂಡುಗಳ ಪೋಣಿಸಿ ಮಾಡಿದ ಮಿಶ್ರ ಲೋಹದ ಸರ,ದಂತದ ಬಣ್ಣದ ಬಾಚಣಿಗೆ,ಅದರಲ್ಲಿ ಸಿಕ್ಕಿ ಬಿದ್ದ ಬೆಳ್ಳಿಗೂದಲು,ಆ ಮಂಚ,ಮಂಚದ ಪ್ರತಿ ಹಲಗೆ,ಹಲಗೆಯ ಪ್ರತಿ ಬಿರುಕು,ಮೂರನೆಯ ಹಲಗೆಯಡಿಯ ಸಂದಿನಲ್ಲಿ,ತಲೆಬದಿಗಿರುತ್ತಿದ್ದ ತಂಬಾಕಿನ ಎಸಳು,ಕಂದುಗಟ್ಟಿದ ವಸಡುಗಳ ಮಧ್ಯೆ ಕೆಂಪಡಿಕೆಯ ಹೋಳು.

"ಮಾಣಿ,ಬಿಸ್ಲಲ್ಲಿ ಒಂದು ಗಳಿಗೆ ಮನಕ್ಯಂಡ್ರೆ ಆಗ್ತಿಲ್ಯ..ಕೂಳೊಂದು ತಿಂಬದು,ಬಟಾರೆದ್ದು ಓಡದು.ಮಕಾ ಹೇಳದು ಕರೀ ಇಂಗಾಳಾಜು,ತಲಿಗಂತೂ ಒಂದು ಹನಿ ಎಣ್ಣೆ ಹೇಳಿ ಕಾಣ್ಸದಿಲ್ಲೆ,ಯಂಕಟು ಬರ್ಲಿ,ಮಾಡ್ಸ್ಗೊಡ್ತಿ"..ಈ ಹುಸಿ ಬೆದರಿಕೆಯನ್ನರಿಯದವನೇ ನಾನು?ಎಣ್ಣೆ ಹಾಕದಿದ್ದರೂ ಆಕೆ ನೆನಪಾಗುತ್ತಾಳೆ.

"ನನ್ನ ಅಮ್ಮನಿಗೆ ಹೊಗೆಸಪ್ಪು ತಂದು ಕೊಟ್ಟೆನೆಂದು" ಬರೆದಿದ್ದ ಒಳ್ಳೆ ಕೆಲಸದ ಪಟ್ಟಿ,ಅದರಿಂದ ಕೆಂಪಾದ ಕಿವಿ ಎಲ್ಲವೂ ನನ್ನಲ್ಲಿ ಕಿರುನಗೆ ಮೂಡಿಸುತ್ತವೆ.ಕೊಟ್ಟ ಎರಡು ರುಪಾಯಿಯಲ್ಲಿ,ಒಂದು ಎಂಭತ್ತು ಹೊಗೆಸಪ್ಪಿನೆಸಳಿಗೆ,ಹತ್ತು ಪೈಸೆಯ ಹುರಿಗಡಲೆ ಅಥವಾ ಸಿಗರೇಟಿನ ಪೆಪ್ಪರಮೆಂಟು, ಉಳಿದ ಹತ್ತು ಪೈಸೆ ನನ್ನ ಬುಗುರಿಯಾಕಾರದ ನಾಣ್ಯದ ಹುಂಡಿಗೆ.ಕೂಡಿ ಕಳೆಯುವ ಲೆಕ್ಕಾಚಾರ,ಕಳೆದು ಕೂಡುವ ಸಂತಸ.ಗಣೀತದ ಭೂತದಿಂದ ನನ್ನನ್ನು ಕಾಪಾಡಿದ್ದು ಆಕೆಯೇ ಅಲ್ಲವೇ?

ಕಟ್ಟುವ ಪರಿಕಲ್ಪನೆ ಒಡಮೂಡಿದ್ದು ಸಹಾ,ಅಪ್ಪ ಮತ್ತು ಆಕೆ ಸೇರಿ ಕಟ್ಟಿದ ಮಣ್ಣಿನ ಗೋಡೆಯ ಕಾರ್ಯದಲ್ಲಿ ಸಲ್ಲಿಸಿದ ಅಳಿಲು ಸೇವೆಯಿಂದಲೆ.ಮನದ ಗೋಡೆ ಎಬ್ಬಿಸಿಕೊಂಡಷ್ಟು ಸುಲಭದ್ದಲ್ಲ ಆ ಕೆಲಸ.ಎಲ್ಲಿಂದಲೋ ಅಮರಿಕೊಂಡ ಕೆಟ್ಟ ಜ್ವರ,ಗಂಟಲಾಳವನ್ನು ಸೀಳಿಕೊಂಡು ಬರುತ್ತಿದ್ದ ನಾಯಿಕೆಮ್ಮು,ನೆಕ್ಕಿಸುತ್ತಿದ್ದ ಸಕ್ಕರೆ ನಿಂಬೆಯ ಮಿಶ್ರಣ, ಕಣ್ಣಿಗೆ ಕಾಣದಂತೆ ಸೀರೆಯ ಅಂಚಿಂದ ಒರೆಸಲ್ಪಡುತ್ತಿದ್ದ ಮೂಗಿನ ತುದಿ ಇವೆಲ್ಲವುಗಳಲ್ಲಿ ಆಕೆ ಮತ್ತೆ ಮತ್ತೆ ನೆನಪಾಗುತ್ತಾಳೆ.
ಇಂಗಾಳ,ಲವಂಗ,ಕರ್ಪೂರ,ಸ್ವಲ್ಪ ಲವಣ,ಹುರಿದ ಕರಿಬೇವುಗಳನ್ನೆಲ್ಲ ಸೇರಿಸಿ ನಾನು ಮಾಡಿಕೊಟ್ಟ "ದಂತ ಮಂಜನ" ಆಕೆಗೆ ನಾ ಕೊಟ್ಟ ಚೆಂದದ ಗಿಪ್ಟು.

ಒಳಮನೆಯ ಕತ್ತಲಿನ ನಸು ಹಳದಿ ಬಾಳೆ ಗೊನೆ,ಅಂಗಳದ ಮಿಡಿ ಸವತೆ,ಹಿತ್ತಲಿನ ಪೇರಲ.ಕದ್ದು ತಿಂದವರಾರು ಎಂಬ ಗುಟ್ಟಿನ ವಿಷಯ ಪಾಲುದಾರಳ ಹೊರತು ಗೊತ್ತಿಲ್ಲ ಯಾರಿಗೂ.

ಅಂಗಳದ ಆ ಕಟ್ಟೆ,ಕಟ್ಟೆಯಂಚಿನ ಕಳೆ,ಕಿತ್ತವರು ಯಾರು ಹೇಳೆ ವೀಳ್ಯದ ಎಲೆ.
ತುಕ್ಕು ತಗಡಿನ ಮೇಲೆ ಸುಟ್ಟ ಗೇರು ಬೀಜ,ಅಚ್ಚಬಿಳುಪಿನಂಗಿಯ ಕಂದು ಚುಕ್ಕಿಯ ಕಲೆ.
ಹದವಾದ ಬಿಸಿ ನೀರು,ಸುಡುವ ಬಚ್ಚಲ ಒಲೆ,ಒರೆಸಿದ್ದು ನನ್ನ ತಲೆ,ಎಲ್ಲಿ ನಿನ್ನಯ ನೆಲೆ ?




4 comments:

ಶಾಂತಲಾ ಭಂಡಿ (ಸನ್ನಿಧಿ) said...

ವಿಕ್ರಮ...
ಕೊನೆಕೊನೆಯ ಸಾಲುಗಳು ಓದುತ್ತಲೇ ಹನಿಯಾಗುತ್ತವೆ.
"ಅಂಗಳದ ಆ ಕಟ್ಟೆ,ಕಟ್ಟೆಯಂಚಿನ ಕಳೆ,ಕಿತ್ತವರು ಯಾರು ಹೇಳೆ ವೀಳ್ಯದ ಎಲೆ."
ಓದುತ್ತ ಮನಭಾರ.

Sudheer said...

Hegde,

Rashi cholo eddu.. I am not so good at literature stuff.. So no expert comments! :)

Karthik S Udupa said...

"ಅಕೆಯ ಅಪ್ಪುಗೆಗೆ ಸಿಲುಕಿದ ಸಾವಂತ ಸಾವಿಗೂ..ಆ ಕ್ಷಣ ಬದುಕಬೇಕು ಎನ್ನಿಸಿರಬೇಕು."
ರಿಯಲಿ ಸೂಪರ್ ಆಗಿದೆ. ಒಂದೇ ಸಮನೆ ಎಲ್ಲ ಪೋಸ್ಟ್ ಓದಿ ಮುಗಿಸಿದೆ. ಇಷ್ಟು ದಿನ ಈ ಬ್ಲಾಗ್ನ ತುಂಬಾ ಮಿಸ್ ಮಾಡ ಕೊಂಡೆ ಅನ್ನಿಸುತ್ತಿದೆ. Next update ಗಾಗಿ ಕಾಯ್ತಾ ಇರ್ತೀನಿ. Great job, continue.
- ಕಾರ್ತಿಕ್ ಎಸ್ ಉಡುಪ

mitra said...

ನಿನ್ನ ಬರವಣಿಗೆಯ ಶೈಲಿ ತುಂಬಾ ಚೆನ್ನಾಗಿದೆ. ಅದರಲ್ಲೂ ಜ್ವರಾರಾಧನೆ ಮತ್ತು ಶ್ರದ್ದಾಂಜಲಿಗಳೆರಡು ನನಗೆ ತುಂಬಾ ಇಷ್ಟವಾಯಿತು. ದಯವಿಟ್ಟು ಮುಂದುವರೆಸು.

- ಮಿತ್ರ